ಕೋಲಾರ: ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಏಳು ಮಂದಿ ಗಾಯಗೊಂಡಿರುವಂತಹ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ನಿನ್ನೆ (ಬುಧವಾರ) ರಾತ್ರಿ ಸಂಭವಿಸಿದೆ.
ಈ ದುರ್ಘಟನೆಯಲ್ಲಿ ಶ್ರೀನಿವಾಸ್, ಹೇಮಶ್ರೀ ಹಾಗೂ ಅವರ ಮಕ್ಕಳಾದ ಮೇಘನಾ, ವೈಶಾಲಿ, ಶಿವ ಮತ್ತು ಶ್ರೀನಿವಾಸ್ ಸೇರಿದಂತೆ ಅವರ ಮನೆಗೆ ಬಂದಿದ್ದ ಸಂಬಂಧಿಕರಾದ ನಾಗಮ್ಮ ಹಾಗೂ ಮುನಿವೆಂಕಟಪ್ಪ ಎಂಬುವರು ಸಹ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮೇಘನಾ ಎಂಬ ಬಾಲಕಿಯ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಬಾ ಹಳೆಯ ಕಟ್ಟಡ ಇದಾಗಿದ್ದು, ಮಳೆ ಬಂದರೆ ಮನೆಯ ಮೇಲ್ಚಾವಣಿಯಿಂದ ನೀರು ಸೋರಿಕೆಯಾಗುತ್ತಿತ್ತು. ಮೇಲ್ಚಾವಣಿಗೆ ತಾಡಪತ್ರಿ ಹಾಕಿ, ಮನೆಯಲ್ಲಿ ಕುಟುಂಬದ ಸದಸ್ಯರು ವಾಸ ಮಾಡುತ್ತಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.