ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮುರುವ ಪ್ರದೇಶದಲ್ಲಿ ಭೂಮಾಲ ಮಹೇಶ್ ಭಟ್ ಎಂಬಾತ ತನ್ನ ತೋಟದಲ್ಲಿ ದುಡಿಯುತ್ತಿದ್ದ ದಲಿತ ಕೂಲಿ ಕಾರ್ಮಿಕನ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣವು ಮಾಣಿಲ ಮುರುವ ಭಾಗದ ದಲಿತ ಸಮುದಾಯದೊಳಗೆ ಆಕ್ರೋಶವನ್ನು ಸೃಷ್ಟಿಸಿದೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಾರ ಕಳೆದರೂ ಆರೋಪಿ ಮಹೇಶ್ ಭಟ್ ನ ಬಂಧಿಸಲು ಪೊಲೀಸ್ ಇಲಾಖೆಗೆ ಈವರೆಗೂ ಸಾಧ್ಯವಾಗಿಲ್ಲ. ದೌರ್ಜನ್ಯ ಎಸಗಿ ತಲೆಮರೆಸಿಕೊಂಡಿರುವ ಪ್ರಭಾವಿ ಭೂಮಾಲಕ ಮಹೇಶ್ ಭಟ್ ಬಂಧನದಿಂದ ತಪ್ಪಿಸಿಕೊಂಡು ಜಾಮೀನು ಪಡೆಯಲು ಸ್ಥಳೀಯ ಪೊಲೀಸರು ಸಹಕರಿಸುತ್ತಿದ್ದಾರೆ. ಆ ಮೂಲಕ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿದೆ.
ಕೃತ್ಯ ಎಸಗಿರುವ ಆರೋಪಿ ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಮಾಡಿಕೊಡಬಾರದು. ಆದಷ್ಟು ಬೇಗ ಮಹೇಶ ಭಟ್ ನನ್ನು ಬಂಧಿಸಬೇಕು, ಅತ್ಯಾಚಾರದ ಶಂಕೆ ಇರುವುದರಿಂದ ವೈಜ್ಞಾನಿಕ ವಿಧಿಗಳ ಮೂಲಕ ಪ್ರಕರಣದ ಆಳವಾದ ತನಿಖೆ ನಡೆಸಬೇಕು. ಹಾಗೂ ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮುಂದಾಗಬೇಕು, ಆ ನಿಟ್ಟಿನಲ್ಲಿ ಹಲವು ಹಂತದ ಹೋರಾಟಗಳನ್ನು ನಡೆಸಲು ಮುರುವ ಸರಕಾರಿ ಶಾಲಾ ಬಳಿಯಲ್ಲಿ ನಡೆದ ದಲಿತ ಹಕ್ಕುಗಳ ಸಮಿತಿ ಕರೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಯಿತು. ಇದರ ಭಾಗವಾಗಿ ಎಪ್ರಿಲ್ 3ರಂದು ವಿಟ್ಲ ನಾಡ ಕಚೇರಿ ಮುಂಭಾಗ ಪ್ರತಿಭಟನಾ ಪ್ರದರ್ಶನ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಮುಖಂಡರಾದ ಈಶ್ವರಿ ಪದ್ಮುಂಜ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೆ ಯಾದವ ಶೆಟ್ಟಿ, ಡಿಎಚ್ಎಸ್ ಜಿಲ್ಲಾ ಮುಖಂಡ ಕೃಷ್ಣಪ್ಪ ಕೊಣಾಜೆ, ಕೃಷ್ಣ ತಣ್ಣೀರುಬಾವಿ, ರಾಧಕೃಷ್ಣ ಬೊಂಡಂತಿಲ, ಸುನೀತಾ, ಮುರುವ ಪ್ರದೇಶದ ಮುಖಂಡರಾದ ಪುಷ್ಪರಾಜ್, ವಿನಯ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.