ಕುದೂರು: ಸಂಗೀತ ಹೇಳಿ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪಟ್ಟಣದ ಮಹಾತ್ಮನಗರದಲ್ಲಿ ನಡೆದಿದೆ.
ಕೃತ್ಯವೆಸಗಿದ ಆರೋಪಿ ಕುದೂರಿನ ನಿವಾಸಿ ರಾಮಾಂಜನೇಯ (48) ನನ್ನು ಪೊಲೀಸರು ಬಂಧಿಸಿದ್ದಾರೆ.
15 ವರ್ಷದ ಅಪ್ರಾಪ್ತ ಬಾಲಕಿಗೆ ಸಂಗೀತ ಹೇಳಿ ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸೆಗಿದ್ದು, ವಿದ್ಯಾರ್ಥಿನಿ ಶಾಲೆಗೆ ತೆರಳಿದ್ದ ವೇಳೆ ತೀವ್ರ ಹೂಟ್ಟೆ ನೋವಿನಿಂದ ಬಳಲಿದ್ದಾಳೆ. ಕೂಡಲೇ ಶಿಕ್ಷಕರು ಪೋಷಕರನ್ನು ಕರೆಸಿ ಮನೆಗೆ ಕಳುಹಿಸಿಕೂಟ್ಟಿದ್ದಾರೆ. ನಂತರ ಪೋಷಕರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದುಕೂಂಡು ಹೋಗಿ ಪರೀಕ್ಷಿಸಿದಾಗ ಪೋಷಕರಿಗೆ ಬಾಲಕಿ ಗರ್ಭಿಣಿಯಾಗಿರುವ ವಿಷಯ ತಿಳಿದಿದೆ.
ಬಳಿಕ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಸಂಗೀತ ಮಾಸ್ಟರ್ ನ ಕೃತ್ಯ ಎಂದು ಬಾಲಕಿ ತಿಳಿಸಿದ್ದಾಳೆ. ವಿಷಯ ತಿಳಿದ ಪೋಷಕರು ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.