ಚಿಂತಾಮಣಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜೈಲಿನಲ್ಲಿದ್ದ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿ.ಭತ್ತಲಹಳ್ಳಿ ಗ್ರಾಮದ ರಾಜು ಎಂಬಾತನ ಆರೋಪ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ.
ಆರೋಪಿ ರಾಜು ಮುರುಗಮಲ್ಲ ಗ್ರಾಮದ ವ್ಯಕ್ತಿಯೊಬ್ಬರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು ಅವರ ಮನೆಗೆ ಹೋಗಿ ಬರುತ್ತಿದ್ದನು. ಇದೇ ಸಲುಗೆಯಿಂದ ವ್ಯಕ್ತಿಯ ಅಪ್ರಾಪ್ತ ವಯಸ್ಸಿನ ಮಗಳನ್ನು ೨೦೨೦ರ ಜೂನ್ ೨೫ರಂದು ಆಟೋದಲ್ಲಿ ಗಂಡ್ರಗಾನಹಳ್ಳಿಗೆ ಕರೆದುಕೊಂಡು ಹೋಗಿದ್ದನು. ಅಲ್ಲಿಂದ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿ ಮರಿನಾಯಕನಹಳ್ಳಿ ಗೇಟ್ ಬಳಿಯ ಶೆಡ್‌ನಲ್ಲಿ ಹಾಗೂ ಮದನಪಲ್ಲಿಯ ಆರೋಪಿ ರಾಜುವಿನ ಸ್ನೇಹಿತನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದನು.
ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇಲೆ ಕೆಂಚಾರ್ಲಹಳ್ಳಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್‌ಸ್ಪೆಕ್ಟರ್ ಕೆ.ಎಂ.ಶ್ರೀನಿವಾಸಪ್ಪ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪ ಸಾಬೀತಾಗಿದ್ದು ಆರೋಪಿಗೆ ಬುಧವಾರ ಜೀವಾವಧಿ ಶಿಕ್ಷೆ ನೀಡಿ ತೀರ್ಪು ನೀಡಿದೆ.
ಆರೋಪಿ ರಾಜು ವಿಚಾರಣೆ ಕಾಲದಲ್ಲಿ ಮಧ್ಯಂತರ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಪೊಲೀಸರು ೨೦೨೪ರ ಜೂನ್ ಮಾಹೆಯಲ್ಲಿ ಆಂಧ್ರಪ್ರದೇಶದಲ್ಲಿ ಆರೋಪಿಯನ್ನು ಪತ್ತೆ ಮಾಡಿ, ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಂದಿನಿಂದಲೂ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.