ಮಂಗಳೂರು (ದಕ್ಷಿಣ ಕನ್ನಡ): ವಿಟ್ಲ: ಮಾಣಿಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಭೂಮಾಲಕ ಮಹೇಶ್ ಭಟ್ ನನ್ನು ತಕ್ಷಣ ಬಂಧಿಸಲು ಒತ್ತಾಯಿಸಿ, ಸಂತ್ರಸ್ತ ದಲಿತ ಕುಟುಂಬಕ್ಕೆ ಧೈರ್ಯ ತುಂಬಿ ಪ್ರಕರಣದ ಸಮಗ್ರ ತನಿಖೆ ನಡೆಸಲು, ಕಠಿಣ ಕಾಯ್ದೆಗಳಡಿ ಪ್ರಕರಣ ದಾಖಲಿಸಲು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ವಿವಿಧ ದಲಿತ ಮತ್ತು ಸಮಾನ ಮನಸ್ಕ ಸಂಘಟನೆಗಳು ಇದರ ಸಹಭಾಗಿತ್ವದಲ್ಲಿ ವಿಟ್ಲದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಿಟ್ಲದ ಮುಖ್ಯ ರಸ್ತೆಯಲ್ಲಿ ಸಂಚರಿಸಿ, ನಾಡಕಚೇರಿ ಬಳಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಹಕ್ಕುಗಳ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಅವರು ಈ ಪ್ರಕರಣವನ್ನು ಪೊಲೀಸರು ಮರೆಮಾಚಿದ್ದಾರೆ. ಕೊಲೆ ಬೆದರಿಕೆ ಹೆತ್ತವರಿಗೆ ಬಂದರೂ ಪೊಲೀಸರು ಮೌನವಾಗಿದ್ದಾರೆ. ಮುಂದೆ ನಮ್ಮ ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಸಂದೇಶ ನೀಡಲು ಈ ಹೋರಾಟ ನಡೆಸಲಾಗುತ್ತಿದೆ. ಬಾಲಕಿಯನ್ನು ವೈದ್ಯಾಕೀಯ ಪರೀಕ್ಷೆಗೆ ಒಳಪಡಿಸಬೇಕು. ಮಹೇಶ್ ಭಟ್ ನನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ ಅವರು ಪೊಲೀಸರ ಮಕ್ಕಳ ಮೇಲೆ ಈ ರೀತಿಯ ದೌರ್ಜನ್ಯವಾದರೆ ಪೊಲೀಸರು ಈ ರೀತಿಯಾಗಿ ವರ್ತಿಸುತ್ತಿದ್ದರಾ? ಎಂದು ಪ್ರಶ್ನಿಸಿದರು.

ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಬಾಲಕಿ ಮೇಲೆ ಕೇವಲ ಲೈಂಗಿಕ ಕಿರುಕುಳ ಮಾತ್ರ ನಡೆದಿಲ್ಲ, ಅತ್ಯಾಚಾರ ನಡೆದಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ದಲಿತ ಹೆಣ್ಮುಕ್ಜಳನ್ನು ಅತ್ಯಾಚಾರ ನಡೆಸಲಾಗುತ್ತಿದೆ. ವಿಟ್ಲ ಪೊಲೀಸ್ ಠಾಣೆಯಲ್ಲ ಅದೊಂದು ಡೀಲ್ ಕೇಂದ್ರವಾಗಿದೆ. ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಯನ್ನು ಪತ್ತೆ ಹಚ್ಚ ಸಾಧ್ಯವಾಗಿಲ್ಲ. ಪೊಲೀಸರು ಅತ್ಯಾಚಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ದಲಿತ, ಕೊರಗ ಸಮುದಾಯದ ಮೇಲೆ ನಿರಂತರ ಶೋಷಣೆ ಆಗುತ್ತಿದೆ. ಪೊಲೀಸರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ಭೂ ಮಾಲಕನ ತೋಟದಲ್ಲಿ ಕೆಲಸ ಮಾಡಲಿ. ದಲಿತರು ಎಂದರೆ ಇವರಿಗೆ ಬೋಗದ ವಸ್ತುವಾಗಿದೆ. ದಿಗಂತ ಪ್ರಕರಣವಾದಗ ಜಿಲ್ಲೆಯ ಬಿಜೆಪಿ ಶಾಸಕರು ಓಡಿ ಬರುತ್ತಾರೆ. ಆದರೆ ಮಾಣಿಲಕ್ಕೆ ಏಕೆ ಬರುತ್ತಿಲ್ಲ. ದಲಿತರು ಹಿಂದೂಗಳು ಆದರೆ ಬಿಜೆಪಿಯವರು ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಪೊಲೀಸರು ಪ್ರಮಾಣಿಕವಾಗಿ ತನಿಖೆ ನಡೆಸಿ ಈ ಘಟನೆಯ ಸತ್ಯಾಸತ್ಯತೆ ಹೊರಗಡೆ ಬರಬೇಕು. ಮುಂದೆ ಎಸ್ಪಿ ಚಲೋ ಕಚೇರಿ ಹೋರಾಟ ನಡೆಸಲಾಗುತ್ತದೆ ಎಂದರು.
ಕಾರ್ಮಿಕ ಮುಖಂಡ ಶೇಖರ ಮಾತನಾಡಿ ಜಾತಿ ಧರ್ಮ ಬಿಟ್ಟು ಎಲ್ಲರೂ ಇಲ್ಲಿ ಸೇರಿದ್ದು, ನಮ್ಮೆಲ್ಲರ ಉದ್ದೇಶವೇ ಬಡ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿದೆ. ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯಿಂದಾಗಿ ಜನರು ನ್ಯಾಯ ವಂಚಿತರಾಗುತ್ತಿದ್ದಾರೆ ಎಂದರು.
ದಿನೇಶ್ ಮೂಳೂರು ಮಾತನಾಡಿ ಬಿಜೆಪಿಯಲ್ಲಿರುವ ದಲಿತ್ ಯುವಕರು ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಅನ್ಯಾಯವಾದಾಗ ಯಾರೂ ಮುಂದೆ ಬರಲ್ಲ. ಪ್ರಗತಿಪರ ಮತ್ತು ದಲಿತ್ ಸಂಘಟನೆ ಮಾತ್ರ ಮುಂದೆ ಬರುತ್ತದೆ. ಮಹೇಶ್ ಭಟ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಹೋರಾಟ ಮುಂದುವರೆಯಲಿದೆ ಎಂದರು.
ಕಾರ್ಮಿಕ ಮುಖಂಡ ಬಿ.ಎಂ ಭಟ್ ಮಾತನಾಡಿದರು. ಬಳಿಕ ಉಪತಹಶೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಲಾಯಿತು. ವಿಟ್ಲ ಪೊಲೀಸರು ಬಂದೋ ಬಸ್ತ್ ಏರ್ಪಡಿಸಿದ್ದರು.