ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಕೋರಿ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ.
ಇಂದಿನ ವಿಚಾರಣೆಯ ಸಂದರ್ಭದಲ್ಲಿ ಬ್ರಿಜ್ ಭೂಷಣ್ ಅವರ ಪರ ವಕೀಲರು ಕುಸ್ತಿಪಟುಗಳ ಆರೋಪ ಹಿಡನ್ ಅಜೆಂಡಾವನ್ನು ಹೊಂದಿದೆ. ಅವರನ್ನು ಡಬ್ಲ್ಯುಎಫ್‍ಐ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ನಡೆಸಿದ ಹುನ್ನಾರ ಎಂದು ವಾದಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಆರೋಪಗಳ ಮತ್ತು ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಸಂಪೂರ್ಣ ಪ್ರಕ್ರಿಯೆಗಳೆರಡನ್ನೂ ರದ್ದು ಮಾಡುವ ಎರಡು ಅರ್ಜಿಗಳನ್ನು ಒಂದೇ ಅರ್ಜಿಯಲ್ಲಿ ಸಲ್ಲಿಸಿದ ನಡೆಯನ್ನು ಪ್ರಶ್ನಿಸಿದರು. ಪ್ರಕರಣ ರದ್ದು ಮಾಡಲು ನಿರಾಕರಿಸಿ ಮುಂದಿನ ವಿಚಾರಣೆಗೆ ಸಿದ್ಧರಾಗಲು ಸೂಚಿಸಿದರು.
ಬಳಿಕ ವಿಚಾರಣೆಯನ್ನು ಸೆ.26ಕ್ಕೆ ನ್ಯಾಯಾಲಯ ಮುಂದೂಡಿತು.
ಸಿಂಗ್ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ದಾಖಲೆಗಳಿವೆ ಎಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು. ಇದಾದ ಬಳಿಕ ಬ್ರಿಜ್ ಭೂಷಣ್ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಹಾಗೂ ಎಫ್‍ಐಆರ್ ಸಂಬಂಧ ವಿಚಾರಣ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಿಂಗ್ ವಿರುದ್ಧ ಒಟ್ಟು ಆರು ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿದ್ದಾರೆ. ಅಪ್ರಾಪ್ತ ಕುಸ್ತಿಪಟುಗಳು ಕೂಡ ಸಿಂಗ್ ವಿರುದ್ಧ ಆರೋಪ ಮಾಡಿದ್ದರು. ನಂತರ ಆಕೆ ತನ್ನ ದೂರನ್ನು ಹಿಂಪಡೆದಿದ್ದು, ದೆಹಲಿ ಪೊಲೀಸರು ಆ ಪ್ರಕರಣದಲ್ಲಿ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ರದ್ದತಿ ವರದಿಯನ್ನು ಸಲ್ಲಿಸಿದ್ದರು.