ಚಾಮರಾಜನಗರ: ಸರ್ವಧರ್ಮದಲ್ಲೂ ಸಂಗೀತಕ್ಕೆ ಪ್ರಾಮುಖ್ಯತೆ ಇದೆ .ಸಂಗೀತ ವಿಶ್ವವನ್ನೇ ಒಂದು ಮಾಡಬಲ್ಲದು. ಸಂಗೀತದಿಂದ ಮನಸ್ಸು ಶುದ್ಧಿಯಾಗಿ ಪರಸ್ಪರ ಸೌಹಾರ್ದ ಭಾವನೆ ಮೂಡಿಸಲು ಶಕ್ತವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿಕೆ ದಾನೇಶ್ವರಿ ತಿಳಿಸಿದರು.
ಜಿಲ್ಲಾ ಗಡಿನಾಡ ಜನಪದ ಕೋಗಿಲೆಗಳ ಸಾಂಸ್ಕೃತಿಕ ಕಲಾವಿದರ ಸಂಘ ಹಾಗೂ ಜಿಲ್ಲಾ ಮದಕರಿ ನಾಯಕರ ಸಂಘ ಆಶ್ರಯದಲ್ಲಿ ಫೆಬ್ರವರಿ 29ರ ಸಂಜೆ ಹರದನಹಳ್ಳಿಯ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಸುಗಮ ಸಂಗೀತ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ ಸಾಂಸ್ಕೃತಿಕ ಕಲಾವಿದರು ಸಂಗೀತ ಕಾರ್ಯಕ್ರಮ ಏರ್ಪಡಿಸಿ ಹಳ್ಳಿಗಳಲ್ಲಿ ಜನಪದ ಹಾಗೂ ಗಾಯನ ಕಾರ್ಯಕ್ರಮ ರೂಪಿಸುತ್ತಿರುವ ಸಂಘಟನೆಗಳ ಕಾರ್ಯ ಅಪಾರ. ವ್ಯವಸ್ಥೆ ಬದಲಾಗಲು ಜನರ ಮನಸ್ಸಿನಿಂದ ಮಾತ್ರ ಸಾಧ್ಯ. ಎಲ್ಲ ಜನರು ಸುಸಂಸ್ಕೃತರಾಗಿ ಉತ್ತಮ ಜೀವನವನ್ನು ನಿರ್ವಹಿಸಲು ಶಾಂತ ಮನಸ್ಸು ಅಗತ್ಯವಿದೆ. ಶಾಂತಿಗೆ ಸಂಗೀತ ಪ್ರೇರಣೆ ನೀಡುವುದು ಎಂದರು.
ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಹಿರಿಯ ಸಿವಿಲ್ ನ್ಯಾಯಾಧೀಶರು ಆದ ಶ್ರೀಧರ್ ಎಂ ನೆರವೇರಿಸಿ ಹಳ್ಳಿಗಳಲ್ಲಿ ಬಾಲ್ಯ ವಿವಾಹ ,ಬಹಿಷ್ಕಾರ ಪದ್ಧತಿ ಗಡಿ ಜಿಲ್ಲೆಯಲ್ಲಿ ಕಂಡುಬರುತ್ತದೆ .ಈ ಸಾಮಾಜಿಕ ಸಮಸ್ಯೆಯನ್ನು ಹೋಗಲಾಡಿಸಬೇಕು. ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಎಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಎಲ್ಲರೂ ಸಹಕರಿಸಬೇಕು . ಪರಸ್ಪರ ಕಚ್ಚಾಟ ಮಾಡಿಕೊಳ್ಳದೆ ಉತ್ತಮ ಜೀವನ ನಡೆಸಿ. ಕಾನೂನುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆದುಕೊಂಡು, ಯಾವುದೇ ಸಮಸ್ಯೆ ಎದುರಾದಾಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ವಹಿಸಿ ಹರದನಹಳ್ಳಿ ಕರ್ನಾಟಕದ ಪ್ರಸಿದ್ಧ ಇತಿಹಾಸ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಗ್ರಾಮ. ಆಧ್ಯಾತ್ಮ ,ಸಾಹಿತ್ಯ, ಕಲೆ ಸಂಗೀತ ,ನಾಟಕ, ವಾಸ್ತು ಶಿಲ್ಪ ದೇವಾಲಯ ನಿರ್ಮಾಣದಲ್ಲಿ ಬಹು ಎತ್ತರಕ್ಕೆ ಬೆಳೆದ ಗ್ರಾಮವಾಗಿದೆ. ನೂರಾರು ಕಲಾವಿದರು, ಸಾಧಕರು ಇರುವ ಈ ಹರದನಹಳ್ಳಿಯಲ್ಲಿ ಸರ್ವರು ಏಕತೆಯ ಮೂಲಕ ಕಲೆ ಸಾಹಿತ್ಯ ಸಂಗೀತ ಮತ್ತು ಯುವ ಮಿತ್ರರ ಉತ್ತಮ ಕಾರ್ಯಗಳಿಗೆ ಸರ್ವ ಜನರು ಬೆಂಬಲವನ್ನು ನೀಡಬೇಕು. ಭವಿಷ್ಯದ ಯುವ ಜನಾಂಗಕ್ಕೆ ಮಾದರಿಯಾದ ಜೀವನ ವ್ಯವಸ್ಥೆ ಹಾಗೂ ಸಾಮಾಜಿಕ ಜವಾಬ್ದಾರಿ ,ಸಂಸ್ಕೃತಿ ,ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಋಗ್ವೇದಿ ಮನವಿ ಮಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘದ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆಯ ಮೂಲಕ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ. ವಿದ್ಯಾರ್ಥಿ, ಮಕ್ಕಳಲ್ಲಿ ಪ್ರೋತ್ಸಾಹದ ವಾತಾವರಣ ನಿರ್ಮಾಣವಾಗುವುದು ಬಹಳ ಸಂತೋಷ ಎಂದು ತಿಳಿಸಿದರು.
ಜಿಲ್ಲಾ ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷರಾದ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ ಚಾಮರಾಜನಗರ ಜಿಲ್ಲೆ ಜನಪದಗಳ ತವರೂರು .ಜನಪದ ಕಲಾವಿದರು ಹುಡುಕಿದಷ್ಟು ಹೆಚ್ಚು ಹೆಚ್ಚು ಸಿಗುತ್ತಾರೆ .
ಕಲಾವಿದರಿಗೆ ಪ್ರೋತ್ಸಾಹ ಸ್ಪೂರ್ತಿ ಮತ್ತು ವೇದಿಕೆ ನಿರ್ಮಾಣ ಮುಖ್ಯವಾಗಿದೆ .ಆ ಹಿನ್ನೆಲೆಯಲ್ಲಿ ಗಡಿನಾಡ ಸಂಸ್ಕೃತಿಕ ಕಲಾ ವೇದಿಕೆ ಮೂಲಕ ಕಲಾವಿದರನ್ನು ಹೊರ ತರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪುರಸ್ಕೃತ ಬಿಕೆ ದಾನೇಶ್ವರಿ ರವನ್ನು ಗೌರವ ಪೂರ್ವಕವಾಗಿ ಅಭಿನಂದಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಘಟಮ್ ಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಟೇಶ್, ಉಪಾಧ್ಯಕ್ಷರಾದ ಯಶೋದ ,ಎಲ್ಲಾ ಗಡಿ ಯಜಮಾನರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ಸದಸ್ಯರು ಉತ್ತಮ ಗಾಯನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟು 3 ಗಂಟೆಗಳ ಕಾಲ ಜನರ ಮನಸ್ಸನ್ನು ಮನಸೂರೆ ಗೊಂಡರು.
.