ಚಾಮರಾಜನಗರ: ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ , ಶ್ರೀ ಶಾರದಾ ಪೀಠ ಶೃಂಗೇರಿ ಹೆಬ್ಬಸೂರು ಶಾಖೆ ನಿರ್ಮಿಸಿರುವ ಶಾರದಾ ಕೃಪಾ ಸಭಾಭವನದ ಉದ್ಘಾಟನೆ ನೆರವೇರಿಸಲು ಜಗದ್ಗುರು ಶಂಕರಾಚಾರ್ಯ ಶ್ರೀ ವಿಧು ಶೇಖರ ಭಾರತಿ ಮಹಾಸ್ವಾಮಿಗಳವರು ವಿಜಯ ಯಾತ್ರೆಯ ಮೂಲಕ ಹೆಬ್ಬಸೂರು ಗ್ರಾಮಕ್ಕೆ ಮಾ. 28 ರಂದು ಆಗಮಿಸಲಿದ್ದಾರೆ.
ಎರಡು ದಿನಗಳ ಕಾಲ ಶಂಕರ ಮಠದಲ್ಲಿ ವಾಸ್ತವ್ಯವನ್ನು ಮಾಡಿ, ನೂತನವಾಗಿ ನಿರ್ಮಿಸಿರುವ ಶಾರದಾ ಕೃಪಾ ಸಭಾಭವನವನ್ನು ಉದ್ಘಾಟನೆ ನೆರವೇರಿಸಲಿದ್ದಾರೆ.
ಇದರ ಅಂಗವಾಗಿ 23 ಶನಿವಾರದಿಂದ 30 ಮಾರ್ಚ್ 24ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ವಾಸ್ತು ಹೋಮ , ಮಹಾ ಗಣಪತಿ ಹೋಮ ,ಶತ ಚಂಡಿಕಾಯಾಗ, ಋಗ್ವೇದ ಸಂಹಿತಾ ಯಾಗ ಚತುರ್ವೇದ ಪಾರಾಯಣಗಳನ್ನು ನೆರವೇರಿಸಲಾಗುವುದು ಎಂದು ಶಾಖಾಮಠದ ಧರ್ಮಾಧಿಕಾರಿಗಳಾದ ಎಚ್ ಎಸ್ ಶ್ರೀಧರ್ ಪ್ರಸಾದ್ ತಿಳಿಸಿದ್ದಾರೆ.
ಮಾರ್ಚ್ 23 ರಿಂದ ಪ್ರತಿನಿತ್ಯ ಋಗ್ವೇದ ಸಂಹಿತಾ ಯಾಗ ನಡೆಯಲಿದ್ದು, 28ರ ಗುರುವಾರ ಸಂಜೆ 5:30ಕ್ಕೆ ಶೃಂಗೇರಿ ಜಗದ್ಗುರು ಶ್ರೀ ವಿಭೂಷಿತ ಶ್ರೀ ಶ್ರೀ ವಿಧು ಶೇಖರ ಭಾರತೀ ಸನ್ನಿಧಾನಂಗಳವರು ಗ್ರಾಮಕ್ಕೆ ಆಗಮಿಸಲಿದ್ದು ಅಂದು ನೂತನ ಸಭಾಭವನ ಉದ್ಘಾಟನೆ ಹಾಗೂ ಧೂಳಿ ಪಾದಪೂಜೆ, ಶ್ರೀ ಶೃಂಗೇರಿ ಜಗದ್ಗುರುಗಳರಿಂದ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ, ಗುರುಪಾದಕ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ.
29ರ ಶುಕ್ರವಾರ ಬೆಳಿಗ್ಗೆ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಶಾರದಾಂಬೆಯ ಪೂಜೆ, ಗುರುಪಾದಕ ಪೂಜೆ , ಭಿಕ್ಷವಂದನೆ, ಶತಚಂಡಿಕಾಯಾಗ ಪೂರ್ಣಹುತಿ ನಡೆಯಲಿದೆ .ಸಂಜೆ 5:30ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು ಆಡಳಿತ ಅಧಿಕಾರಿಗಳಾಗಿ ನಿವೃತ್ತರಾದ ಪದ್ಮಶ್ರೀ ಗುರು ಸೇವಾ ದೂರಿನ ಡಾ. ವಿ ಆರ್ ಗೌರಿಶಂಕರ್ ಅವರಿಗೆ ಅಭಿನಂದನೆ ಹಾಗೂ ಈಗಿನ ಆಡಳಿತ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪಿಎ ಮುರಳಿ ರವರನ್ನು ಸನ್ಮಾನಿಸಲಾಗುವುದು.
ಶ್ರೀ ಶೃಂಗೇರಿ ಜಗದ್ಗುರುಗಳ ರವರಿಂದ ಅನುಗ್ರಹ ಭಾಷಣ ಏರ್ಪಡಿಸಿದೆ ಎಂದು ಹಾಗೂ 30 ಶನಿವಾರ ಶ್ರೀ ಶ್ರೀ ಜಗದ್ಗುರುಗಳವರು ಮೈಸೂರಿಗೆ ವಿಜಯ ಯಾತ್ರೆ ಮುಂದುವರೆಸಲಿದ್ದಾರೆ ಎಂದು ತಿಳಿಸಿದ್ದಾರೆ.