ಪಿರಿಯಾಪಟ್ಟಣ: ಸರ್ಕಾರಿ ಸವಲತ್ತುಗಳು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ದೊರೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುವಂತೆ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ತಿಳಿಸಿದರು.
ತಾಲೂಕಿನ ಶಾನುಭೋಗನಹಳ್ಳಿ ಗ್ರಾಮದಲ್ಲಿ ನೂತನವಾಗಿ ಪಡಿತರ ಉಪ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಬಡವರ ಹಿಂದುಳಿದ ಹಾಗೂ ಸಮಾಜದ ವಿವಿಧ ವರ್ಗದ ಜನರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ, ಈ ಹಿಂದೆಯೂ ಶಾಸಕನಾಗಿದ್ದ ಸಂದರ್ಭ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು.
ಮುಂಬರುವ ದಿನಗಳಲ್ಲಿಯೂ ಮೂಲಭೂತ ಸೌಕರ್ಯಗಳ ಕೊರತೆ ಸಮಸ್ಯೆ ಬಗೆಹರಿಸಿ ಹಂತವಾಗಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು, ದೂರದ ಊರುಗಳಿಂದ ಪಡಿತರ ತರಲು ವಯೋವೃದ್ಧರು ಮಹಿಳೆಯರಿಗೆ ಆಗುತ್ತಿದ್ದ ಅನಾನುಕೂಲ ತಪ್ಪಿಸಲು ಸ್ಥಳೀಯವಾಗಿ ನೂತನ ಪಡಿತರ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ಆಹಾರ ಇಲಾಖೆ ಶಿರಸ್ತೆದಾರ್ ಸಣ್ಣಸ್ವಾಮಿ ಅವರು ಮಾತನಾಡಿ ಸಚಿವರ ಮಾರ್ಗದರ್ಶನದಂತೆ ಈಗಾಗಲೇ ತಾಲೂಕಿನ ವಿವಿದೆಡೆ ನೂತನ ಪಡಿತರ ಉಪ ಕೇಂದ್ರ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದೆ ವೇಳೆ ಕಣಗಾಲು ಹಾಗೂ ದೊಡ್ಡಕಮರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಚಿವರಾದ ಕೆ.ವೆಂಕಟೇಶ್ ಅವರು ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ರಹಮತ್ ಜಾನ್ ಬಾಬು, ತಹಶೀಲ್ದಾರ್ ಕುಂ ಇ ಅಹಮದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್, ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್, ಜಿ.ಪಂ ಎಇಇ ಮಲ್ಲಿಕಾರ್ಜುನ್, ಪಿಡಬ್ಲ್ಯೂಡಿ ಎಇಇ ವೆಂಕಟೇಶ್, ಬಿಇಓ ಬಸವರಾಜು, ಸಿಡಿಪಿಓ ಮಮತಾ, ಆರ್ ಎಫ್ಓ ಕಿರಣ್ ಕುಮಾರ್, ಹಾರಂಗಿ ಇಲಾಖೆ ಎಇ ಶಿವಕುಮಾರ್, ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಸಾದ್, ಉಪ ತಹಶಿಲ್ದಾರ್ ಮಹೇಶ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮೋಹನ್ ಕುಮಾರ್, ಗಣೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರು ಇದ್ದರು.