Saturday, September 13, 2025
Google search engine

Homeರಾಜ್ಯಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ: ಶೀಘ್ರ ಕಾಮಗಾರಿ ಆರಂಭ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ: ಶೀಘ್ರ ಕಾಮಗಾರಿ ಆರಂಭ

ಚಿಕ್ಕಮಗಳೂರು: ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೇಂದ್ರ ವನ್ಯಜೀವಿ ಮಂಂಡಳಿ ಅನುಮೋದನೆ ನೀಡಿದ್ದು, ಸ್ಥಳೀಯರ ಮನವೊಲಿಸಿ ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಆ ಭಾಗದ ಜನರಿಗೆ ಯಾವುದೇ ಆತಂಕ ಬೇಡ. ಪರಿಸರದ ಮೇಲೆ ದುಷ್ಪರಿಣಾಮ ಬೀರದಂತೆ ಯೋಜನೆ ಜಾರಿಗೊಳಿಸಲಾಗುವುದು. ಪರಿಸರದ ಮೇಲೆ ದೊಡ್ಡ ಮಟ್ಟದಲ್ಲಿ ಹಾನಿಯಾಗುವುದಿಲ್ಲ. ಈ ವಿಚಾರವನ್ನು ಜನರಿಗೆ ತಿಳಿಸಿ ಅವರ ಮನವೊಲಿಸಲಾಗುವುದು ಎಂದರು.

2000 ಮೆಗಾವ್ಯಾಟ್ ಸಾಮರ್ಥ್ಯ ಈ ಯೋಜನೆ ಅನುಷ್ಠಾನಕ್ಕೆ ಕೇವಲ ಕೇವಲ 120 ಎಕರೆ ಜಮೀನು ಸಾಕು.ಇದರಲ್ಲಿ 50 ಎಕರೆ ಖಾಸಗಿಯಾಗಿದ್ದು, ಉಳಿದಂತೆ ಕಂದಾಯ ಮತ್ತು ಅರಣ್ಯ ಮತ್ತು ಕಂದಾಯ ಭೂಮಿಯನ್ನು ಬಳಸಿಕೊಳ್ಳಲಾಗುತ್ತದೆ. ಖಾಸಗಿಯವರ ಭೂಮಿಗೆ ಸೂಕ್ತ ಪರಿಹಾರ ನೀಡಲಾಗುವುದು. ಯೋಜನೆಗೆ ಬಳಸಿಕೊಳ್ಳುವ ಅರಣ್ಯಕ್ಕೆ ಬದಲಾಗಿ ಅರಣ್ಯ ಇಲಾಖೆಗೆ ಅರಣ್ಯೀಕರಣಕ್ಕೆ ಬೇರೆ ಕಡೆ ಭೂಮಿ ನೀಡಲಾಗುವುದು ಎಂದು ತಿಳಿಸಿದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ಹೊಸ ಜಲಾಶಯಗಳನ್ನು ನಿರ್ಮಿಸುವುದರಿಂದ ನದಿ ಹರಿವಿಗೂ ಅಡ್ಡಿಯಾಗುವುದಿಲ್ಲ. ಗೇರುಸೊಪ್ಪದಿಂದ ಪೈಪ್ ಲೈನ್ ಮೂಲಕ ನೀರನ್ನು ಮೇಲಿನ ಹಂತದಲ್ಲಿರುವ ತಲಕಳಲೆ ಜಲಾಶಯಕ್ಕೆ ಪಂಪ್ ಮಾಡಲಾಗುತ್ತದೆ. ಈ ಪೈಲ್ ಲೈನ್ ಗಳು ನೆಲದ ಒಳಗೆ ಇರುತ್ತದೆ. ಬಹುತೇಕ ನಿರ್ಮಾಣಗಳು ಸುರಂದ ಒಳಗೇ ಇರುವುದರಿಂದ ಯೋಜನೆಯಿಂದ ದೊಡ್ಡಮಟ್ಟದಲ್ಲಿ ಪರಿಸರಕ್ಕೆ ಹಾನಿಯಾಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯೋಜನೆ ಅನುಷ್ಠಾನವಾದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚುವರಿಯಾಗಿ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು ಮತ್ತು ಅಗತ್ಯ ಸಂದರ್ಭದಲ್ಲಿ ಗ್ರಾಹಕರಿಗೆ ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರೈತರಿಗೆ ಸೌರ ವಿದ್ಯುತ್: ರೈತರ ನೀರಾವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಕುಸುಮ್ ಬಿ ಯೋಜನೆ ಅನುಷ್ಠಾಗೊಳಿಸಲಾಗಿದೆ. ವಿದ್ಯುತ್ ಫೀಡರ್ ನಿಂದ 500 ಮೀಟರ್ ಗಿಂತ ದೂರ ಇರುವ ಕೊಳವೆ ಬಾವಿಗಳಿಗೆ ಕುಸುಮ್ ಬಿ ಯೋಜನೆಯಡಿ ಸೌರವಿದ್ಯುತ್ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಶೇ. 80ರಷ್ಟು ಸಬ್ಸಿಡಿ ನೀಡಲಾಗುವುದು. ಇನ್ನುಳಿದ ಶೇ. 20 ರಷ್ಟು ಹಣವನ್ನು ಮಾತ್ರ ಫಲಾನುಭವಿ ಭರಿಸಬೇಕು ಎಂದು ಹೇಳಿದರು.

ಅದೇ ರೀತಿ ಕುಸುಮ್ ಸಿ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಸೌರ ವಿದ್ಯುತ್ ತಯಾರಿಸಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನುಷ್ಠಾನವಾದಲ್ಲಿ 2500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಬ್ ಸ್ಟೇಷನ್ ಗಳಲ್ಲಿ ಅಥವಾ ಲೈನ್ ಗಳಲ್ಲಿ ಸಮಸ್ಯೆ ಇರುವೆಡೆ ಮಾತ್ರ ವಿದ್ಯುತ್ ವ್ಯತ್ಯಯವಾಗುತ್ತಿರಬಹುದು. ಹೀಗಾಗಿಯೇ ಪ್ರತಿ ವರ್ಷ ರಾಜ್ಯದಲ್ಲಿ 100 ಹೊಸ ಸಬ್ ಸ್ಟೇಷನ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಇದ್ದರು.

RELATED ARTICLES
- Advertisment -
Google search engine

Most Popular