ರಾಮನಗರ: ಆಸ್ಟ್ರೀಯಾ ವೈದ್ಯರಾದ ಕಾರ್ಲೆಲ್ಯಾಂಡ್ ಸ್ಟೇನರ್ ರವರು ಮಾನವನ ರಕ್ತದ ಮೊದಲ 3 ಗುಂಪುಗಳನ್ನು ಸಂಶೋಧನೆ ಮಾಡಿದರು. ವೈದ್ಯ ಕಾರ್ಲೆಲ್ಯಾಂಡ್ ಸ್ಟೇನರ್ ಜೂನ್ -14 ರಂದು ಜನಿಸಿದ್ದು ಇವರ ಜನ್ಮದಿನದ ಅಂಗವಾಗಿ ವಿಶ್ವ ರಕ್ತದಾನ ದಿನವನ್ನು ಆಚರಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ರಕ್ತ ಒಂದು ಸಂಜೀವಿನಿ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಅದೇನಿದ್ದರು ನಮ್ಮ ದೇಹದಲ್ಲೆ ಉತ್ಪತ್ತಿಯಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಾಂತರಾಜು ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಬೆಳ್ಳಿ ರಕ್ತನಿಧಿ, ರೋಟರಿ ಸಿಲ್ಕ್ ಸಿಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನಕಪುರ ಇವರ ಸಹಕಾರದೊಂದಿಗೆ ಕನಕಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನದ ಮಹತ್ವ ಕುರಿತು ಜಾಗೃತಿ ಮತ್ತು ದಾನಿಗಳಿಂದ ರಕ್ತ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತುರ್ತು ಸಂದರ್ಭಗಳಲ್ಲಿ ರಕ್ತವನ್ನು ಇನ್ನೊಬ್ಬರ ದೇಹದಿಂದ ತೆಗೆದು ಅಗತ್ಯ ಇರುವವರಿಗೆ ರಕ್ತ ನೀಡಿದರೆ ಮಾತ್ರ ಜೀವ ಉಳಿಯಲು ಸಾಧ್ಯ. ಆದ್ದರಿಂದ ರಕ್ತದಾನ ಎನ್ನುವುದು ಜೀವ ದಾನಕ್ಕೆ ಸಮ. ವಿಶ್ವದಲ್ಲಿ ಪ್ರತಿ 2 ಸೆಕೆಂಡಿಗೊಮ್ಮೆ ಯಾರಾದರೊಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ದೇಹದಲ್ಲಿ ಆರೋಗ್ಯವಂತ ರಕ್ತವಿದ್ದರೆ ಸಾಲದು ರಕ್ತದಾನ ಮಾಡಿ ಜೀವ ಉಳಿಸಬಲ್ಲ ಮನಸ್ಸು ಪ್ರತಿಯೊಬ್ಬರಿಗೂ ಇರಬೇಕು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಜೊತೆಗೆ ಮಾಹಿತಿಯನ್ನು ಇತರರಿಗೂ ತಿಳಿಸಿ ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚಾಗಿ ಹಂಚಿಕೊಳ್ಳುವ ಘೋಷವಾಕ್ಯವನ್ನು ಸಹಕಾರಗೊಳಿಸಲು ರಕ್ತ ದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಡ್ಯಾಪ್ಕೋ ಅಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಗಂಡು-ಹೆಣ್ಣೆAಬ ಬೇಧವಿಲ್ಲದೆ 18 ರಿಂದ 60 ವರ್ಷದೊಳಗಿನ ಎಲ್ಲರೂ ರಕ್ತದಾನ ಮಾಡಬಹುದು. ಒಂದು ಪಿಂಟ್ ರಕ್ತ 3 ಜೀವಗಳನ್ನು ಉಳಿಸಲು ಸಾಧ್ಯ ಆರೋಗ್ಯವಂತ ಗಂಡಸು ವರ್ಷದಲ್ಲಿ 4 ಬಾರಿ, ಹೆಂಗಸರು 3 ಬಾರಿ ರಕ್ತದಾನವನ್ನು ಮಾಡಬಹುದು ಇದರಿಂದ ದಾನಿಯ ದೇಹದಲ್ಲಿ ಹೊಸರಕ್ತ ಉತ್ಪತ್ತಿಯಾಗಲು ಪ್ರಚೋಧನೆ ಉಂಟಾಗುತ್ತದೆ. ರಕ್ತದಲ್ಲಿನ ಕೊಬ್ಬಿನಾಂಶ ಕಡಿಮೆಮಾಡಿ ಹೃದಯಘಾತವನ್ನು ತಡೆಯಲು ಸಹಕಾರಿಯಾಗುತ್ತದೆ. ಜೊತೆಗೆ ಪ್ರತಿಯೊಬ್ಬರು ಪೌಷ್ಠಿಕ ಆಹಾರ ಸೇವಿಸಿ ರಕ್ತದ ಕೊರತೆಯಾಗದಂತೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು
ಪ್ರಾಂಶುಪಾಲರಾದ ಡಾ. ಶ್ಯಾಮಲ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ಆರೋಗ್ಯ ಇಲಾಖೆ ವತಿಯಿಂದ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಅತಿ ಹೆಚ್ಚುಭಾರಿ ರಕ್ತದಾನ ಮಾಡಿದ 6 ರಕ್ತದಾನಿಗಳು ಮತ್ತು ರಕ್ತದಾನ ಮಹತ್ವ ಕುರಿತು ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದ 3 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗಿದ್ದು ಇದರಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಪ್ರೇರೇಪಿಸಿದಂತ್ತಾಗುತ್ತದೆ. ಮನುಷ್ಯ ಆರ್ಥಿಕವಾಗಿ ಬಡವನಾಗಿದ್ದರು ಸಮಾಜಿಕವಾಗಿ ರಕ್ತ ದಾನ ನೀಡುವ ಮೂಲಕ ಶ್ರೀಮಂತನಾಗ ಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಎಲ್.ಒ ಡಾ. ಮಂಜುನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ಶಿವರಾಜು, ಗವಿರಾಜು, ಕಾರ್ಯದರ್ಶಿ ಇಶಾಂತ್, ಜಿಲ್ಲಾ ಡ್ಯಾಪ್ಕೋ ಸಂಯೋಜಕರಾದ ನಳಿನ, ರೆಡ್ ಕ್ರಾಸ್ ಸಂಚಾರಕರಾದ ಮರ್ಸಿ ವಿಕ್ಟೋರಿಯ, ಕೋಟ್ಪ ಸಂಯೋಜಕರಾದ ಫಯಾಜ್ಹ್ ಅಹಮದ್, ಚಂದ್ರಶೇಕರ್, ಮೇಲ್ವಿಚಾರಕರಾದ ಶಿವನಂಜಪ್ಪ, ಬೆಳ್ಳಿ ರಕ್ತನಿಧಿ ಮುಖ್ಯಸ್ಥ ರಾಮು, ಪ್ರಾಧ್ಯಾಪಕಾರದ ವಿಶ್ವರಾಧ್ಯ, ಅಕ್ಷತಾಪರಂಜ್ಯೋತಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.