ಬೆಂಗಳೂರು: ಬೆಂಗಳೂರುನಲ್ಲಿ ಕಾರಿಗೆ ಬೈಕ್ ಟಚ್ ಆಯ್ತು ಅನ್ನೋ ಕ್ಷುಲ್ಲಕ ಕಾರಣಕ್ಕೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಬೈಕ್ ಸವಾರ ವಿಕಾಸ್ ಕುಮಾರ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಬಳಿಕ ಬೋಸ್ ವಿರುದ್ಧ ಕೊಲೆಯತ್ನದ ಕೇಸ್ ದಾಖಲಾಯಿತು. ಸದ್ಯ, ಅವರು ಈ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ಪೀಠ, ಬೋಸ್ ವಿರುದ್ಧ ತಾತ್ಕಾಲಿಕವಾಗಿ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶ ನೀಡಿದೆ. ಜೊತೆಗೆ ವಿಕಾಸ್ ಕುಮಾರ್‌ಗೂ ನೋಟಿಸ್ ಜಾರಿಗೆ ಆದೇಶಿಸಿದೆ.
ಬೋಸ್ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಬೋಸ್ ಗಂಭೀರ ಗಾಯಗೊಂಡಿದ್ದರೆ, ವಿಕಾಸ್‌ಗೆ ಮಾತ್ರ ಸಣ್ಣ ಗಾಯವಾಗಿದೆ ಎಂದು ಎಫ್ಐಆರ್ ತಿಳಿಸುತ್ತದೆ ಎಂದು ಹೇಳಿದ್ದಾರೆ. ದೂರು 12 ಗಂಟೆಗಳ ವಿಳಂಬವಾಗಿ ದಾಖಲಾಗಿದೆ ಎಂದು ಸಹ ಅವರು ಹೇಳಿದ್ದಾರೆ.
ಈ ನಡುವೆಯೇ, ಬೋಸ್ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೋಸ್‌ನ ಕ್ರೌರ್ಯವನ್ನು ಮತ್ತು ಸುಳ್ಳು ಹೇಳಿಕೆಯನ್ನು ಬಯಲಿಗೆಳೆದಿದೆ. ಈ ಘಟನೆ ಸೇನೆಯ ಮಾನ ಹರಾಜು ಮಾಡಿದಂತಹ ರಾಜಕೀಯ ಚರ್ಚೆಗೆ ಕಾರಣವಾಗಿದೆ.