Monday, April 21, 2025
Google search engine

Homeಅಪರಾಧಶಿವಮೊಗ್ಗ: ಹುಂಡೈ ಕಾರು ಶೋರೂಂನಲ್ಲಿ ಅಗ್ನಿ ಅವಘಡ- 3 ಕಾರು ಸಂಪೂರ್ಣ ಭಸ್ಮ

ಶಿವಮೊಗ್ಗ: ಹುಂಡೈ ಕಾರು ಶೋರೂಂನಲ್ಲಿ ಅಗ್ನಿ ಅವಘಡ- 3 ಕಾರು ಸಂಪೂರ್ಣ ಭಸ್ಮ

ಶಿವಮೊಗ್ಗ: ನಗರದ ಶಂಕರಮಠದಲ್ಲಿರುವ ರಾಹುಲ್ ಹುಂಡೈ ಕಾರು ಶೋ ರೂಂನಲ್ಲಿ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ಆಕಸ್ಮಿಕ ಬೆಂಕಿ ಅವಘಡ ನಡೆದಿದೆ.

ಕಾರು ಶೋ ರೂಂ ಸಂಪೂರ್ಣ ವಾಲ್ ಸೀಲಿಂಗ್ ​ನಿಂದ ಮಾಡಿದ್ದಾಗಿದ್ದರಿಂದ ಬೆಂಕಿ ಕೆನ್ನಾಲಿಗೆಗೆ ಶೋರೂಂನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.

ಅಲ್ಲದೇ ಬೆಂಕಿಯು ಶೋ ರೂಂನ ಮೇಲ್ಭಾಗ ಸೇರಿದಂತೆ ನೆಲಮಹಡಿಗೂ ಆವರಿಸಿದ್ದು, ಇದರಿಂದ ಶೋ ರೂಂನಲ್ಲಿ ಡಿಸ್ಪ್ಲೇ ಗೆಂದು ಇಟ್ಟಿದ್ದ 6 ಕಾರುಗಳಲ್ಲಿ 3 ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ.

ಸರ್ವೀಸ್​ಗೆ ಎಂದು ಇಟ್ಟಿದ್ದ ಕಾರುಗಳು ಹಾಗೂ ಪಕ್ಕದ ಟಾಟಾ ಶೋ ರೂಂನ ಹೊರಭಾಗದಲ್ಲಿದ್ದ ನಾಲ್ಕರಿಂದ – ಐದು ಕಾರುಗಳು ಸಹ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಭಾಗಶಃ ಹಾನಿಯಾಗಿವೆ. ಅಲ್ಲದೇ ನೆಲ ಮಾಳಿಗೆಯಲ್ಲಿ ಇಟ್ಟಿದ್ದ ಕಾರಿನ ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ.

ಶೋ ರೂಂಗೆ ಹೇಗೆ ಬೆಂಕಿ ಬಿತ್ತು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಅಗ್ನಿಶಾಮಕದಳದ ನಾಲ್ಕು ವಾಹನಗಳು ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಶೋ ರೂಂನಲ್ಲಿ ಎಷ್ಟು ಕಾರುಗಳು ಹಾಗೂ ಇತರ ನಷ್ಟ ಉಂಟಾಗಿವೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ಸ್ಥಳಕ್ಕೆ ಶಿವಮೊಗ್ಗ ನಗರ ಡಿವೈಎಸ್ಪಿ ಸೇರಿದಂತೆ ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಘಟನೆ ಬಗ್ಗೆ ಮಾತನಾಡಿದ ಶೋ ರೂಂ ಸೇಲ್ಸ್​ ಮ್ಯಾನೇಜರ್​ ಮಣಿಕಂಠ, “ನಮಗೆ ಸುಮಾರು ರಾತ್ರಿ 8 ಗಂಟೆಗೆ ಶೋ ರೂಂಗೆ ಬೆಂಕಿ ಬಿದ್ದಿರುವ ಮಾಹಿತಿ ಬಂತು. ತಕ್ಷಣ ನಾವೆಲ್ಲಾ ಶೋರೂಂ ಬಳಿ ಬಂದೆವು.‌ ಹೇಗೆ ಬೆಂಕಿ ಬಿತ್ತು ಎಂದು ನಮಗಿನ್ನೂ ತಿಳಿದು ಬಂದಿಲ್ಲ. ಸದ್ಯ ಬೆಂಕಿ ನಂದಿದೆ. ಶೋ ರೂಂನಲ್ಲಿ ಡಿಸ್ಪ್ಲೇಗೆ ಇಟ್ಟಿದ್ದ 6 ಕಾರುಗಳಲ್ಲಿ 3 ಕಾರು ಸುಟ್ಟು ಹೋಗಿವೆ. ಇನ್ನೂ ಕಾರಿನ ಬಿಡಿ ಭಾಗಗಳು ಸುಟ್ಟಿವೆ. ಪಾರ್ಕಿಂಗ್ ​ನಲ್ಲಿದ್ದ ಗ್ರಾಹಕರ ಕಾರುಗಳು ಸೇಫ್ ಆಗಿವೆ. ಗ್ರಾಹಕರು ಭಯಪಡುವ ಅಗತ್ಯವಿಲ್ಲ. ನಾವು ಕಾನೂನಿನ ಪ್ರಕಾರ ಫೈರ್​ ಸೇಫ್ಟಿ ಎಲ್ಲವನ್ನೂ ಮಾಡಿಕೊಂಡಿದ್ದೆವು. ಆದರೂ ಹೀಗೆ ಬೆಂಕಿ ಬಿದ್ದಿದೆ. ಆದರೆ, ಅಗ್ನಿಶಾಮಕ ದಳದವರು ನಮಗೆ ಸರಿಯಾಗಿ ಸ್ಪಂದಿಸಿಲ್ಲ” ಎಂದು ಆರೋಪಿಸಿದರು.

ಬೆಂಕಿ ನಂದಿಸಿದ ನಂತರ ಮಾತನಾಡಿದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಜಿ.ಮಹಾಲಿಂಗಪ್ಪ, “ಸುಮಾರು 10 ಗಂಟೆಗೆ ನಮಗೆ ವಿಷಯ ತಿಳಿಯಿತು.‌ ತಕ್ಷಣ ನಮ್ಮ ಒಂದು ವಾಹನವನ್ನು ಕಳುಹಿಸಿಕೊಟ್ಡಿದ್ದೆವು. ಬೆಂಕಿ ಪ್ರಮಾಣ ಹೆಚ್ಚಾದ ಕಾರಣ ಇನ್ನೊಂದು ವಾಹನವನ್ನು ಕಳುಹಿಸಿಕೊಡಲಾಯಿತು. ಬಳಿಕ 16 ಸಾವಿರ ಲೀಟರ್ ವಾಹನವನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ತರಲಾಯಿತು. ನಂತರ ಬೆಂಕಿ ಹತೋಟಿಗೆ ಬಂದಿತು. ಆದರೆ, ಅಂಡರ್​ಗ್ರೌಂಡ್ ​ನಲ್ಲಿ ಆಯಿಲ್, ಪೆಟ್ರೋಲ್ ಇದ್ದ ಕಾರಣ ಬೆಂಕಿ ಕಂಟ್ರೋಲ್​ ಗೆ ಬರಲಿಲ್ಲ. ನಂತರ ಮತ್ತೊಂದು ವಾಹನ ತಂದು ಬೆಂಕಿಯನ್ನು ನಂದಿಸಲಾಯಿತು. ಮುಖ್ಯವಾಗಿ ಶೋ ರೂಂನವರು ಬೆಂಕಿ ಶಮನದ ಕುರಿತು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಇದರಿಂದಲೇ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಯಿತು. ಸುಮಾರು ನಾಲ್ಕೈದು ಕಾರು ಕಾರುಗಳು ಸುಟ್ಟು ಹೋಗಿವೆ. ಅದೇ ರೀತಿ ಪಕ್ಕದ ಟಾಟಾ ಶೋ ರೂಂನ ನಾಲ್ಕೈದು ಕಾರುಗಳು ಬೆಂಕಿಗೆ ಭಾಗಶಃ ಸುಟ್ಟು ಹೋಗಿವೆ. ಬೆಂಕಿ ಬಿದ್ದ ಕಾರಣ ಹಾಗೂ ಏನೇನು ನಷ್ಟ ಉಂಟಾಗಿವೆ ಎಂಬುದು ತನಿಖೆಯಿಂದ ತಿಳಿದು ಬರಬೇಕಷ್ಟೆ” ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular