ಅಮೆರಿಕಾ: ಹಡಗೊಂದು ಬಾಲ್ಟಿಮೋರ್ ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಸೇತುವೆಯು ಕುಸಿದು ಬಿದ್ದು, ನೀರಿನಲ್ಲಿ ತೇಲುತ್ತಿದ್ದು, ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಡಿಕ್ಕಿಯಲ್ಲಿ ಕಾಣೆಯಾಗಿರುವ ವ್ಯಕ್ತಿಗಳು ಮೃತಪಟ್ಟಿರಬಹುದು ಎಂದು ಶಂಕಿಸಿರುವ ರಕ್ಷಣಾ ಪ್ರಾಧಿಕಾರಗಳು, ರಕ್ಷಣಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ.
ಸಂಪೂರ್ಣವಾಗಿ ಭಾರತೀಯ ಸಿಬ್ಬಂದಿಗಳು ನಿರ್ವಹಿಸುತ್ತಿದ್ದ ಸರಕು ಸಾಗಣೆ ಹಡಗೊಂದು ನಿಯಂತ್ರಣ ಕಳೆದುಕೊಂಡು ಸೇತುವೆಗೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಎಲ್ಲ ೨೨ ಮಂದಿ ಹಡಗು ಸಿಬ್ಬಂದಿಗಳು ಸುರಕ್ಷಿತವಾಗಿದ್ದರೂ, ಸೇತುವೆಯ ಮೇಲಿದ್ದ ಆರು ಮಂದಿ ಕಾಣೆಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕಾ ಕರಾವಳಿ ರಕ್ಷಣಾ ಪಡೆಯ ರಿಯರ್ ಅಡ್ಮಿರಲ್ ಶಾನನ್ ಗಿಲ್ರೀತ್, ಸಮಯದ ದೀರ್ಘತನ, ನಾವು ನಡೆಸಿರುವ ಶೋಧ ಕಾರ್ಯಾಚರಣೆಯ ವ್ಯಾಪ್ತಿ ಹಾಗೂ ನೀರಿನ ತಾಪಮಾನವನ್ನು ಆಧರಿಸಿ ಹೇಳುವುದಾದರೆ, ಕಾಣೆಯಾಗಿರುವ ವ್ಯಕ್ತಿಗಳು ಬದುಕುಳಿದಿರಬಹುದು ಎಂದು ಯಾವ ಹಂತದಲ್ಲೂ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾವು ಸದ್ಯ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೇವೆ ಹಾಗೂ ನೀರಿನಲ್ಲಿನ ತಾಪಮಾನ ಮತ್ತು ತರಂಗಗಳು ಮುಳುಗು ತಜ್ಞರು ದೀರ್ಘಕಾಲ ನೀರಿನಾಳದಲ್ಲಿ ಇರುವುದನ್ನು ಕ್ಲಿಷ್ಟಕರಗೊಳಿಸಿರುವುದರಿಂದ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.