ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರವರ ಜನ್ಮದಿನಾಚರಣೆ ಹಾಗೂ ಕಂಚಿನ ಕಂಠದ ನಟ ಚಾಮರಾಜನಗರದ ಸುಂದರಕೃಷ್ಣ ಅರಸ್ ರವರ ನೆನಪು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನೆರವೇರಿಸಲಾಯಿತು.
ಶಿವರಾಮ ಕಾರಂತರು ಹಾಗೂ ಸುಂದರ ಕೃಷ್ಣ ಅರಸರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಮಾತನಾಡಿದ ಹಿರಿಯ ಕಲಾವಿದರಾದ ಹರದನಹಳ್ಳಿ ಘಟಂ ಕೃಷ್ಣರವರು, ಸುಂದರ್ ಕೃಷ್ಣ ಅರಸ್ ರವರು ಕನ್ನಡ ಚಿತ್ರರಂಗದ ಹೆಮ್ಮೆಯ ನಟ . ಚಿತ್ರರಂಗದ ಬಹುತೇಕ ನಟರಿಗೆ ಕಂಠ ದಾನ ಮಾಡಿರುವ ಅರಸು, ಭಾರತದ ಅನೇಕ ಚಿತ್ರರಂಗದ ಕಲಾವಿದರಿಗೆ ಧ್ವನಿ ನೀಡಿದ ಮಹಾನ್ ನಟ ಎಂದು ತಿಳಿಸಿದರು.
ಅಮೋಘ ಅಭಿನಯದ ಮೂಲಕ ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ ನಟರು .ಚಾಮರಾಜನಗರ ಅವರ ಪ್ರೀತಿಯ ಊರಾಗಿದ್ದು, ಉತ್ತುವಳ್ಳಿ ಗ್ರಾಮ ಅವರ ಹುಟ್ಟುರಾಗಿತ್ತು. ಚಾಮರಾಜನಗರದ ನರಹರಿ ,ವಿಷಕಂಠ ಮೂರ್ತಿ, ಘಟಮ್ ಕೃಷ್ಣ ,ಕುಮಾರರಾಧ್ಯ ಮುಂತಾದವರ ಒಡನಾಟ ಸುಂದರ್ ಕೃಷ್ಣ ಅರಸರವರೆಗೆ ಹೆಚ್ಚಿತ್ತು. ಸುಂದರ್ ಕೃಷ್ಣ ಅರಸರವರ ಚಲನಚಿತ್ರರಂಗದ ಕೊಡುಗೆ ಮತ್ತು ನೆನಪು ಕಾರ್ಯಕ್ರಮವನ್ನು ರೂಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿಯವರಿಗೆ ವಿಶೇಷವಾದ ಧನ್ಯವಾದಗಳು ಅರ್ಪಿಸಿದರು. ನವಂಬರ್ 9 ಅವರ 30ನೇ ವರ್ಷದ ಪುಣ್ಯ ದಿನವಾಗಿದೆ ಅಂದು ವಿಶೇಷವಾಗಿ ಅವರ ಕುಟುಂಬದವರನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಲ್ಲ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನೆರವೇರಿಸೋಣ .ಕನ್ನಡ ಚಿತ್ರರಂಗದ ಕಲಾವಿದರಿಗೆ ಗೌರವಿಸುವುದು ನಮ್ಮ ಕರ್ತವ್ಯವೆಂದು ತಿಳಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯಾಧ್ಯಕ್ಷರಾದ ಚಾ ರo ಶ್ರೀನಿವಾಸ ಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅನೇಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಚಿಂತನೆಗೆ ಅವಕಾಶ ಮಾಡಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಪ್ರತಿ ಮಂಗಳವಾರದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಶಿವರಾಮ ಕಾರಂತರ ಬಗ್ಗೆ ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ, ಕಾರಂತರು ಸಾಹಿತ್ಯದ ಬಹು ಪ್ರತಿಭೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮ ಚಾಪು ಮೂಡಿಸಿದ ಶಿವರಾಮ ಕಾರಂತರು ಸಾಹಿತಿಗಳಾಗಿ ರಾಜಕಾರಣವನ್ನು ಪ್ರವೇಶಿಸಿದವರು. ಅವರ ಅನೇಕ ಕಾದಂಬರಿಗಳು ಇಂದಿಗೂ ಜನಪ್ರಿಯವಾಗಿದೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮೂಕಜ್ಜಿಯ ಕನಸುಗಳು ,ಚೋಮನ ದುಡಿ ವಿಶೇಷ ಪರಿಣಾಮವನ್ನು ಬೀರಿದ ಕೃತಿಯಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಶಿವರಾಮ ಕಾರಂತರು ನಡೆದಾಡುವ ವಿಶ್ವಕೋಶ ವೆಂದು ಪ್ರಸಿದ್ಧರು. 427 ಹೆಚ್ಚು ಕೃತಿಗಳನ್ನು, ನಾಟಕಗಳನ್ನು, ಕಾದಂಬರಿಗಳನ್ನು ರಚಿಸಿದ ಮಹಾನ್ ವ್ಯಕ್ತಿ. ಮಹಾತ್ಮ ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಕಾರಂತರು ಯಕ್ಷಗಾನ, ನಾಟಕ, ಬಾಲ ವಿಜ್ಞಾನ, ರಾಜಕಾರಣ ಶಿಕ್ಷಣ ಪರಿಸರ ಹತ್ತು ಹಲವು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ 95 ವರ್ಷದ ಹಿರಿಯ ಜೀವಿ ಅಮೂಲ್ಯ ರತ್ನವಾಗಿದ್ದರು. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಶಿವರಾಮ ಕಾರಂತರ ಜೀವನ ಅವರ ಇತಿಹಾಸ ಸರ್ವರಿಗೂ ಮಾದರಿ. ಅವರ ಸಾಹಿತ್ಯ ಅಧ್ಯಯನ ಜ್ಞಾನ ಭಂಡಾರದ ವಿಶ್ವ ಕೋಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಮಾತನಾಡಿ ತಾಲೂಕಿನಲ್ಲಿ ಅನೇಕ ಸಾಹಿತಿಗಳು, ವಿಜ್ಞಾನಿಗಳು, ತಂತ್ರಜ್ಞಾನಿಗಳು, ಕೃಷಿಕರು, ಸಾಧಕರು, ಚಲನಚಿತ್ರರಂಗದ ಹಿರಿಯರು, ಶಿಕ್ಷಣ ಪ್ರೇಮಿಗಳು, ನಾಟಕ, ರಂಗಭೂಮಿ, ಜನಪದದ ಅಮೂಲ್ಯ ವ್ಯಕ್ತಿತ್ವ ಇರುವ ಎಲ್ಲಾ ಸಾಧಕರ ಚಿಂತನೆಗೆ ಕನ್ನಡ ಸಾಹಿತ್ಯ ಪರಿಷತ್ತು ಶ್ರಮಿಸುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ ವೆಂಕಟೇಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಮಹದೇವ ನಾಯಕ, ಕನ್ನಡ ಹೋರಾಟಗಾರ ಪುಟ್ಟಸ್ವಾಮಿ, ಕೆಎಂ ನಾಗರಾಜು, ಸುರೇಶ ಗೌಡ, ಬೊಮ್ಮಾಯಿ ,ಗೋವಿಂದರಾಜು, ಶಿವಲಿಂಗ ಮೂರ್ತಿ, ರಂಗಭೂಮಿನಟ ಕುಮಾರರಾಧ್ಯ, ಶ್ರಾವ್ಯ ಋಗ್ವೇದಿ, ಇದ್ದರು.