Wednesday, January 14, 2026
Google search engine

Homeರಾಜ್ಯತುಳುಭವನದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ ಉದ್ಘಾಟನೆ

ತುಳುಭವನದಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ ಉದ್ಘಾಟನೆ

ಶಿವಯೋಗಿ ಸಿದ್ದರಾಮರ ಜೀವನ ಕ್ರಮವನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಲು ಕರೆ

ಸಮಾಜದ ಏಳಿಗೆಗಾಗಿ ಮತ್ತು ಬದುಕುವ ಪರಿಸರ ವ್ಯವಸ್ಥಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು 12 ನೇ ಶತಮಾನದ ಶಿವಯೋಗಿ ಸಿದ್ದರಾಮ ಅವರು ಅಂದಿನ ಕಾಲಘಟ್ಟದಲ್ಲಿಯೇ ರೂಪಿಸಿದ್ದಾರೆ ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಉರ್ವಸ್ಟೋರ್ ತುಳುಭವನದಲ್ಲಿ ಬುಧವಾರ ನಡೆದ ಶಿವಯೋಗಿ ಸಿದ್ದರಾಮ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಶಿವಯೋಗಿ ಸಿದ್ದರಾಮರ ವಚನಗಳು ಜ್ಞಾನದ ಸಂದೇಶಗಳನ್ನು ಒಳಗೊಂಡಿದೆ. ವಚನಕಾರರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಇಂತಹ ಜಯಂತಿ ಆಚರಣೆ ಸಂದರ್ಭಗಳಲ್ಲಿ ಮಕ್ಕಳಿಗೆ ವಚನಕಾರರ ಆದರ್ಶ, ತತ್ವಗಳನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ಅವರು ಹೇಳಿದರು. ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಸೋಮಣ್ಣ ಉಪನ್ಯಾಸ ನೀಡಿ ಮಾತನಾಡಿ, ಶಿವಯೋಗಿ ಸಿದ್ದರಾಮ ಅವರ ಜೀವನ ಕ್ರಮವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. 12ನೇ ಶತಮಾನದ ಮಹಾನ್ ವಚನಕಾರರಲ್ಲಿ ಸಿದ್ದರಾಮ ಕೂಡ ಒಬ್ಬರಾಗಿದ್ದು, ಬಾಲ್ಯದಲ್ಲಿ ಇವರು ಚಾಣಾಕ್ಷ ಅಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ದನ ಮೇಯಿಸಲು ಕಳುಹಿಸಿದ್ದರು. ಇವರು ಶ್ರೀಶೈಲಕ್ಕೆ ಹೋಗಿ ಬಂದ ಬಳಿಕ ಜ್ಞಾನಿಯಾಗಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕಾಯಕವನ್ನು ದೇವರೆಂದು ಭಾವಿಸಿ, ತಮ್ಮ ಕೆಲಸಗಳಲ್ಲಿ ದೇವರನ್ನು ಕಂಡ ಅವರ ಚರಿತ್ರೆಗಳನ್ನು ಓದಿ ಅವರ ವಚನಗಳ ಸಾರವನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಸದಸ್ಯೆ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ವಾರುಣಿ ನಾಗರಾಜ್ ನಿರೂಪಿಸಿ ವಂದಿಸಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular