ಗುಂಡ್ಲುಪೇಟೆ: ಕೇಂದ್ರ ಸರ್ಕಾರ 15 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳದ ಘೋಷಣೆ ಮಾಡಿರುವುದು ಕೇವಲ ಚುನಾವಣೆ ಗಿಮಿಕ್ ಮಾತ್ರ. ಇದು ರೈತರನ್ನು ಕಣ್ಣೊರೆಸುವ ತಂತ್ರ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಆಕ್ರೋಶ ಹೊರ ಹಾಕಿದರು.
ಈ ಕುರಿತು ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಕೇಂದ್ರ ಬಿಜೆಪಿ ಸರ್ಕಾರ ಬೆಂಬಲ ಹೆಚ್ಚಳ ಮಾಡಿದೆ. ಅದು ಕೇವಲ 300-400 ರೂ. ಮಾತ್ರ. ಇದು ಅವೈಜ್ಞಾನಿಕ ಬೆಲೆಯಾಗಿದೆ. ಈ ಹಿಂದೆ ಕೃಷಿ ಕಾಯ್ದೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾದ ವೇಳೆ ನೂರಾರು ಮಂದಿ ರೈತರ ಸಾವಿಗೆ ಬಿಜೆಪಿ ಸರ್ಕಾರ ಕಾರಣವಾಗಿದೆ. ರೈತರ ಪ್ರತಿಭಟನೆ ಕಾವು ಜೋರಾದ ಹಿನ್ನಲೆ ಕೃಷಿ ಕಾಯ್ದೆ ಹಿಂಪಡೆಯುವ ಕೆಲಸ ಮಾಡಿತು. ಇದೀಗ ಬೆಂಬಲ ಬೆಲೆ ಹೆಸರಿನಲ್ಲಿ ರೈತ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಗುಡುಗಿದರು.
ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷ ಸೂರ್ಯಕಾಂತಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಪ್ರತಿಭಟನೆ ಮಾಡಿದರೂ ಸಹ ಮೌನ ವಹಿಸಿದ್ದ ಸರ್ಕಾರ ಇದೀಗ ಖರೀದಿ ಕೇಂದ್ರಗಳನ್ನು ತೆರೆಯದೆ ಬೆಂಬಲ ಬೆಲೆ ಹೆಚ್ಚಿಸಿದೆ. ಇದು ಅವೈಜ್ಞಾನಿಕ ನಿರ್ಧಾರವಾಗಿದೆ. ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಮಾಡುವ ಮೂರು ತಿಂಗಳಿಗೆ ಮುಂಚೆ ಖರೀದಿ ಕೇಂದ್ರ ತೆರೆದು ಖರೀಸಬೇಕು. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ಬೆಂಬಲ ಬೆಲೆ ಘೋಷಣೆ ಮಾಡಿರುವ ನಿರ್ಧಾರ ಸರಿಯಲ್ಲ ಎಂದು ತಿಳಿಸಿದರು.