ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಿವಿತುಂಬೆಲ್ಲಾ ಪಟಾಕಿ ಸದ್ದು. . . ಇದರ ನಡುವೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತಾದಿಗಳು . . . ಅಲಂಕೃತಗೊಂಡಿದ್ದ ಮಂಟಪದಲ್ಲಿ ಪ್ರತಿಷ್ಠಾಪನೆಗೊಂಡ ಸೀತಾ ರಾಮ ಲಕ್ಷ್ಮಣ. . . ನದಿಯಲ್ಲಿ ಮೂರು ಸುತ್ತು ಸುತ್ತಿದ ಉತ್ಸವ ಮೂರ್ತಿಗಳು . . . ದೇವಲೋಕವೇ ಧರೆಗೆ ಬಂದ ಅನುಭವ . . . ಈ ಇಂತಹ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದ ಸಾವಿರಾರು ಮಂದಿ. . .
ಇದು ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಕಾವೇರಿ ನದಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪುರಾಣ ಪ್ರಸಿದ್ದವಾಗಿರುವ ಶ್ರೀ ರಾಮದೇವರ ತೆಪ್ಪೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
ರಾತ್ರಿ 7.45 ರ ನಂತರ ಇಲ್ಲಿನ ಶ್ರೀ ರಾಮದೇವರ ದೇವಾಲಯದಿಂದ ಶ್ರೀ ರಾಮ, ಲಕ್ಷಣ, ಸೀತಾಮಾತೆ ದೇವರುಗಳ ಉತ್ಸವ ಮೂರ್ತಿಗಳನ್ನು ಪಟಾಕಿ ಸಿಡಿಸುವ ಮೂಲಕ ಅದ್ದೂರಿ ಮೆರವಣಿಗೆ ಮೂಲಕ ಕಾವೇರಿ ನದಿಯ ದಡದಲ್ಲಿ ದೇವಾಲಯದ ಸಮೀಪವಿರುವ ಆಂಜನೇಯ ಗುಡಿಯ ಬಳಿ ವರ್ಣರಂಜಿತ ವಿದ್ಯುತ್ ಲೈಟ್‌ಗಳು ಮತ್ತು ಹೂವಿನ ಅಲಂಕಾರಗಳಿಂದ ಶೃಂಗಾರಗೊoಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು.
ಅನಂತರ ತೆಪ್ಪದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಾತ್ರಿ 8.15ರ ಸಮಯದಲ್ಲಿ ಕಾವೇರಿ ನದಿಯ ಮಧ್ಯ ಭಾಗಕ್ಕೆ ತೆಗೆದುಕೊಂಡು ಹೋಗಿ 3 ಭಾರಿ ತಿರುಗಿಸುತ್ತಿದ್ದಂತೆಯೇ ತೆಪ್ಪದಲ್ಲಿದ್ದ ಅರ್ಚಕ ವಾಸುದೇವನ್ ಉತ್ಸವ ಮೂರ್ತಿಗಳಿಗೆ ಮಂಗಳಾರತಿಯನ್ನು ಮಾಡಿದಾಗ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ರಾಮನಿಗೆ ಜೈಕಾರ, ಶ್ರೀರಮಣನ ಗೋವಿಂದಾ ಗೋ..ವಿಂದಾ ಎಂಬ ಘೋಷಣೆಗಳನ್ನು ಮೊಳಗಿಸಿದಾಗ ದೇವಲೋಕವೇ ಧರೆಗೆ ಬಂದಂತೆ ಭಾಸವಾಯಿತು.
ಕಾವೇರಿ ನದಿಯಲ್ಲಿ ಸುತ್ತಿ ಬಂದ ಶ್ರೀರಾಮ, ಲಕ್ಷಣ, ಸೀತಾ ದೇವರುಗಳ ಉತ್ಸವ ಮೂರ್ತಿಗಳನ್ನು ಭಕ್ತಾಧಿಗಳು ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡು ತಮ್ಮ ಇಷ್ಟಾರ್ಥವನ್ನು ಈಡೇರುವಂತೆ ಪ್ರಾರ್ಥಿಸಿಕೊಂಡರು.
ಆನಂತರ ಉತ್ಸವ ಮೂರ್ತಿಗಳನ್ನು ಮತ್ತೆ ದೇವಾಲಯಕ್ಕೆ ಒತ್ತು ತರಲಾಯಿತು. ಈ ಬಾರಿಯ ಕಡ ತೆಪ್ಪೋತ್ಸವಕ್ಕೆ ಗುಂಡ್ಲುಪೇಟೆ ಆನಂದ್‌ಕುಮಾರ್ ಎಂಬುವವರು ಭಾರಿ ಪಟಾಕಿಗಳನ್ನು ಸಿಡಿಸುವ ಮೂಲಕ ತೆಪ್ಪೋತ್ಸವಕ್ಕೆ ಕಳೆತಂದರು.
ಕಾರ್ಯಕ್ರಮದಲ್ಲಿ ಸಾಲಿಗ್ರಾಮ ತಹಸೀಲ್ದಾರ್ ನರಗುಂದ, ಉಪತಹಸೀಲ್ದಾರ್ ಕೆ.ಜೆ.ಶರತ್ , ಗ್ರಾಮ ಲೆಕ್ಕಿಗರಾದ ಮೇಘ, ಮೌನೇಶ್, ಕಾವೇರಿ, ಪ್ರಿಯಾ, ದೇವಾಲಯದ ಇಓ ಕೆ.ರಘು, ಪಾರುಪತ್ತೆದಾರ್ ಯತೀರಾಜ್, ಸೇರಿದಂತೆ 3 ಸಾವಿರ ಭಕ್ತಾಧಿಗಳು ಹಾಜರಿದ್ದರು.