ಚಾಮರಾಜನಗರ: ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಆದಿವಾಸಿ ಜನಾಂಗದ ಬಿರ್ಸಾಮುಂಡ ಅವರ ಜಯಂತಿ ಆಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮ ಇದೇ ನವೆಂಬರ್ ೧೫ರಂದು ಚಾಮರಾಜನಗರದಲ್ಲಿ ಆಯೋಜಿಸುತ್ತಿದ್ದು, ಇದಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಶ್ರೀ ಬಿರ್ಸಾಮುಂಡ ಜಯಂತಿ ಆಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ್ದ ಆದಿವಾಸಿ ಜನಾಂಗದ ಬಿರ್ಸಾಮುಂಡ ಅವರ ಜಯಂತಿ ಆಚರಣೆಯ ರಾಜ್ಯ ಮಟ್ಟದ ಕಾರ್ಯಕ್ರಮ ಈ ಬಾರಿ ನಗರದಲ್ಲಿ ಆಯೋಜಿತವಾಗುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಆದಿವಾಸಿಗಳ ಸಂಖ್ಯೆಯು ಹೆಚ್ಚಿದೆ. ಬಿರ್ಸಾಮುಂಡ ಅವರ ಜಯಂತಿ ಆಚರಣೆಯ ರಾಜ್ಯಮಟ್ಟದ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಯುತ್ತಿರುವುದರಿಂದ ಅರ್ಥಪೂರ್ಣವಾಗಿ ಕಾರ್ಯಕ್ರಮ ಏರ್ಪಾಡು ಮಾಡಲು ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕಾರ್ಯಕ್ರಮದಂದು ಬಿರ್ಸಾಮುಂಡ ಅವರ ಭಾವಚಿತ್ರದ ಮೆರವಣಿಗೆಯನ್ನು ಕಲಾ ತಂಡಗಳೊಡನೆ ನಡೆಸಬೇಕಿದೆ. ಬುಡಕಟ್ಟು ಜನಾಂಗದ ಕಲಾವಿದರಿಗೆ ಹೆಚ್ಚಿನ ಆದ್ಯತೆ ಇರಬೇಕಿದೆ. ವೇದಿಕೆ ಕಾರ್ಯಕ್ರಮವು ಅಚ್ಚುಕಟ್ಟಾಗಿ ಆಯೋಜನೆ ಮಾಡಬೇಕು. ವಿಶೇಷವಾಗಿ ಬುಡಕಟ್ಟು, ಆದಿವಾಸಿ ಕಲಾವಿದರ ವಿವಿಧ ಪ್ರಕಾರಗಳ ಕಲಾ ಪ್ರದರ್ಶನ ಸಹ ಏರ್ಪಾಡು ಮಾಡಬೇಕು ಎಂದರು.
ಕಾರ್ಯಕ್ರಮದ ಸುಗಮ ನಿರ್ವಹಣೆಗೆ ವಿವಿಧ ಸಮಿತಿಗಳು ರಚನೆಯಾಗಲಿದೆ. ಈ ಸಮಿತಿಯಲ್ಲಿ ಆದಿವಾಸಿ ಮುಖಂಡರು, ಪ್ರತಿನಿಧಿಗಳು ಒಳಗೊಳ್ಳಲಿದ್ದಾರೆ. ಆಯಾ ಸಮಿತಿಗಳು ಚರ್ಚಿಸಿ ವೈವಿಧ್ಯಮಯವಾಗಿ ಕಾರ್ಯಕ್ರಮ ರೂಪುಗೊಳಿಸಲು ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಕಾರ್ಯಕ್ರಮ ಯಶಸ್ವಿಯಾಗಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು. ಇದೇ ವೇಳೆ ಕಾರ್ಯಕ್ರಮ ಸಂಬಂಧ ಸಭೆಯಲ್ಲಿ ಹಾಜರಿದ್ದ ಮುಖಂಡರು ಸಲಹೆ ಅಭಿಪ್ರಾಯಗಳನ್ನು ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಮುಖಂಡರಾದ ಡಾ. ಸಿ ಮಾದೇಗೌಡ, ವಿ. ಮುತ್ತಯ್ಯ, ಮುದ್ದಯ್ಯ, ಚೆಲುವರಾಜು, ಪುಟ್ಟಮ್ಮ, ರತ್ನಮ್ಮ, ಸಿ. ಮಹದೇವ, ಜಡೇಸ್ವಾಮಿ, ಕೋಣೂರೆಗೌಡ, ಶಿವಣ್ಣ, ಮಹದೇವಮ್ಮ, ಇತರರು ಸಭೆಯಲ್ಲು ಉಪಸ್ಥಿತರಿದ್ದರು.