Wednesday, December 3, 2025
Google search engine

Homeಕ್ರೀಡೆಟಿ20 ಸರಣಿಗೆ ಶುಭ್ ಮನ್ ಗಿಲ್ ಫಿಟ್!

ಟಿ20 ಸರಣಿಗೆ ಶುಭ್ ಮನ್ ಗಿಲ್ ಫಿಟ್!

ಮುಂಬೈ: ಕುತ್ತಿಗೆ ನೋವಿನಿಂದಾಗಿ ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯಿಂದ ದೂರ ಉಳಿದಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭ್ ಮನ್ ಗಿಲ್ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಈಗಾಗಲೇ ಮೈದಾನದಲ್ಲಿ ಅಭ್ಯಾಸ ಶುರು ಮಾಡಿದ್ದು, ಡಿ. 9 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಮರಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಗಿಲ್ ಅವರು ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದು, ಮುಂಬೈನ ಬೆನ್ನುಮೂಳೆಯ ತಜ್ಞರು ಅವರಿಗೆ ವಿಶ್ರಾಂತಿ ಸೂಚಿಸಿದ್ದರು. ಹಾಗಾಗಿ, ಅವರು ಡಿ. 1 ರಂದು ಗಿಲ್ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ತಲುಪಿದ್ದು, ಆಗಿನಿಂದಲೂ ಅಲ್ಲಿನ ರೀಹ್ಯಾಬಿಲಿಟೇಷನ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇನ್ನೂ ಟಿ20 ಸರಣಿಗೆ ತಾವು ಆಯ್ಕೆಯಾಗಬೇಕಾದರೆ ಅವರು ಆಯ್ಕೆ ಮಂಡಳಿಯ ಮುಂದೆ ತಮ್ಮ ಫಿಟ್ನೆಸ್ ಸಾಬೀತುಪಡಿಸಬೇಕಿದ್ದು, ಸದ್ಯಕ್ಕೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಅವರಿಗೆ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಅಭ್ಯಾಸಗಳನ್ನೂ ದೈನಂದಿನ ವೇಳಾಪಟ್ಟಿಗೆ ಸೇರಿಸಲಾಗಿದೆ ಎನ್ನಲಾಗಿದೆ. ಗಿಲ್ ಇನ್ನೂ ‘ರಿಟರ್ನ್ ಟು ಪ್ಲೇ’ ಅನುಮತಿ ಪಡೆದಿಲ್ಲ. ಮುಂದಿನ 48 ಗಂಟೆಗಳಲ್ಲಿ ಅವರು ಮ್ಯಾಚ್ ಸಿಮ್ಯುಲೇಶನ್ ನಡೆಸಲಿದ್ದು, ಅದರಲ್ಲಿ ಯಾವುದೇ ಸಮಸ್ಯೆ ಕಂಡುಬರದಿದ್ದರೆ ಅವರಿಗೆ ರಿಟರ್ನ್ ಟು ಪ್ಲೇ ಅನುಮತಿ ಸಿಗುವ ಸಾಧ್ಯತೆ ಇದೆ. ಯಾವುದೇ ಅಡೆತಡೆಗಳು ಬರದಿದ್ದರೆ, ಅವರು ಡಿ. 6 ರಂದು ಕಟಕ್‌ನಲ್ಲಿ ತಂಡವನ್ನು ಸೇರಿಕೊಳ್ಳಬಹುದು. ಮುಂದಿನ 24 ಗಂಟೆಗಳಲ್ಲಿ ಪ್ರಕಟವಾಗಲಿರುವ ಭಾರತದ ಟಿ20 ತಂಡದಲ್ಲಿ ಗಿಲ್ ಹೆಸರು ಇರಲಿದೆ. ಆದರೆ ‘ಫಿಟ್ನೆಸ್’ ಗೆ ಒಳಪಟ್ಟಿರುತ್ತದೆ ಎಂಬ ಷರತ್ತು ಇರಬಹುದು ಎಂದಿದ್ದಾರೆ.

ಬಿಸಿಸಿಐ ಅಡಿಯಲ್ಲಿರುವ ಅಜಿತ್ ಅಗರ್ಕರ್ ನೇತೃತ್ವದ ತಂಡದ ಆಯ್ಕೆ ಸಮಿತಿಗೆ ಗಿಲ್ ಅವರು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ಒಂದು ವೇಳೆ ಆಯ್ಕೆ ಮಂಡಳಿಯು ಅವರನ್ನು ಬೇಗನೆ ಆಡಿಸಲು ಇಷ್ಟಪಡದಿದ್ದರೆ, ಅವರು ಸರಣಿಯ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಬಹುದಷ್ಟೇ. ಆದರೆ, 2ನೇ ಪಂದ್ಯದಲ್ಲಿ ಆಡುವುದಂತೂ ಪಕ್ಕಾ ಎಂದು ಹೇಳಲಾಗುತ್ತಿದೆ.

ಹಾಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಮುಗಿಯುವ ಹೊತ್ತಿಗೆ ಶುಭಮನ್ ಗಿಲ್ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆ ಅನೇಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಪೂರಕವಾಗಿ, ಶುಭ್ ಮನ್ ಗಿಲ್ ಅವರು ಕುತ್ತಿಗೆ ನೋವಿನ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಸುದ್ದಿ ಹೊರಬಿದ್ದಿದೆ. ಆ ಹಿನ್ನೆಲೆಯಲ್ಲಿ, ಗೂಗಲ್ ನಲ್ಲಿ ಅನೇಕರು ಇವರ ಬಗ್ಗೆ ಹೆಚ್ಚು ತಿಳಿಯಲು ಹುಡುಕಾಟ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular