ನವದೆಹಲಿ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ ನ. 22 ರ ಶನಿವಾರದಿಂದ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸರಣಿ ಡ್ರಾ ಆಗಿದ್ದರೂ ಸರಣಿ ಗೆಲ್ಲಬೇಕಾದರೆ ಭಾರತಕ್ಕೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಭಾರತದ ನಾಯಕ ಶುಭಮನ್ ಗಿಲ್ ರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ. ಆದಾಗ್ಯೂ ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ. ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಗಿಲ್ ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ ಅವರು ಮೈದಾನ ತೊರೆಯಬೇಕಾಯಿತು.
ವಾಷಿಂಗ್ಟನ್ ಸುಂದರ್ ಕೋಲ್ಕತ್ತಾ ಟೆಸ್ಟ್ ನಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದರು. ಅವರು ಎರಡನೇ ಇನ್ನಿಂಗ್ಸ್ ನಲ್ಲಿ ಇತರ ಬ್ಯಾಟ್ಸ್ ಮನ್ ಗಳಿಗಿಂತ ಉತ್ತಮ ಪ್ರದರ್ಶನ ನೀಡಿದರು, ಆದರೆ ಎರಡನೇ ಟೆಸ್ಟ್ನಲ್ಲಿ ಅವರು ಈ ಸ್ಥಾನದಲ್ಲಿ ಬ್ಯಾಟಿಂಗ್ ಮುಂದುವರಿಸುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.
ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮುಂದುವರಿಯಲಿದ್ದು, ಶುಭಮನ್ ಗಿಲ್ ಎರಡನೇ ಟೆಸ್ಟ್ ನಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿರುವುದರಿಂದ ಸಾಯಿ ಸುದರ್ಶನ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಹೆಚ್ಚುತ್ತಿದೆ.
ನಾಯಕ ಶುಭಮನ್ ಗಿಲ್ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ, ರಿಷಭ್ ಪಂತ್ ಈ ಸ್ಥಾನದಲ್ಲಿ ಆಡಬಹುದು ಎನ್ನಲಾಗುತ್ತಿದೆ. ಪಂತ್ ಉಪನಾಯಕರಾಗಿದ್ದು, ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಟೆಸ್ಟ್ ನಲ್ಲಿ ಪಂತ್ ಐದನೇ ಸ್ಥಾನದಲ್ಲಿ ಆಡಿದ್ದರು.
ಎರಡನೇ ಟೆಸ್ಟ್ ಗೆ ಭಾರತದ ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್



