ಮೈಸೂರು: ಸಿದ್ದರಾಮಯ್ಯರನ್ನು ಕಾಂಗ್ರೆಸ್‌ಗೆ ಕರೆತಂದಾಗ ಈ ದುರಹಂಕಾರಿಯನ್ನು ಏಕೆ ಕರೆ ತರುತ್ತಿದ್ದೀರಿ ಎಂದು ಹಲವಾರು ಮಂದಿ ನಾಯಕರು ಹೇಳಿದ್ದರು. ಆದರೆ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕರೆತಂದವರನ್ನೇ ಮುಗಿಸಿ ಬಿಟ್ಟರು ಎಂದು ಎಂಎಲ್‌ಸಿ ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿ, ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್ ಪಾರ್ಟಿಗೆ ಸೇರಲು ಡಿ.ಕೆ. ಶಿವಕುಮಾರ್ ಪಾತ್ರವು ಪ್ರಮುಖವಾಗಿದೆ. ಡಿ.ಕೆ. ಶಿವಕುಮಾರ್ ಹುಟ್ಟು ಕಾಂಗ್ರೆಸ್ಸಿಗ, ಆದ್ದರಿಂದ ಡಿಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡಲೇಬೇಕು ಎಂದು ಒತ್ತಾಯಿಸಿದ್ರು. ಇನ್ನು ಮಾತಿನ ಉದ್ದಕ್ಕೂ ಸಿದ್ದರಾಮಯ್ಯ ವಿರುದ್ದವೇ ಮಾತನಾಡಿದ ಹಳ್ಳಿಹಕ್ಕಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯರೇ ಕಾರಣ. ಕಾಂಗ್ರೆಸ್‌ನಿಂದ 14 ಮಂದಿ ಶಾಸಕರನ್ನು ಕಳುಹಿಸಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದೇ ಸಿದ್ದರಾಮಯ್ಯ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ನೆರವು ನೀಡಿ, ನಾನು ಸೋಲುವಂತೆ ಮಾಡಿದ್ದು ಕೂಡ ಸಿದ್ದರಾಮಯ್ಯನವರೆ. ಅಲ್ದೆ ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಲು, 2013 ರ ವಿಧಾನಸಭೆ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ ಪರಮೇಶ್ವರ್‌ರವರನ್ನು ಸೋಲಿಸಿದ್ದು, ಕೂಡ ಇದೇ ಸಿದ್ದರಾಮಯ್ಯನವರು ಎಂದು ಸಿದ್ದು ವಿರುದ್ದ ಕಿಡಿಕಾರಿದರು.
ರಾಜಕೀಯವಾಗಿ ಬೆಳೆಸಿದ ಹೆಚ್.ಡಿ.ದೇವೇಗೌಡರನ್ನು ಧಿಕ್ಕರಿಸಿದ ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ. ಸಿದ್ದರಾಮಯ್ಯ ಒಬ್ಬ ಕೃತಜ್ಞತಾ ಹೀನ ಎಂದು ಅಭಿಪ್ರಾಯ ಪಟ್ಟಿದ್ದಾರೆ. ದೇವರಾಜ ಅರಸು ಅವರಿಗೆ ಸಿದ್ದರಾಮಯ್ಯ ಸರಿಸಮವಾಗಲು ಎಂದಿಗೂ ಸಾಧ್ಯವಿಲ್ಲ. ದೇವರಾಜ ಅರಸು ಅವರು ನೀಡಿದ ಕೊಡುಗೆಗಳನ್ನು ನೀಡಲು ಸಿದ್ದರಾಮಯ್ಯಗೆ ಸಾಧ್ಯವಿಲ್ಲ. ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಸುತ್ತೂರು ಶ್ರೀಗಳ ಕಾಲಿಡಿದು, ಕಾ.ಪು. ಸಿದ್ದಲಿಂಗಸ್ವಾಮಿಯನ್ನು ತಣ್ಣಗಾಗಿಸಿದರು. ಚಾಮುಂಡೇಶ್ವರಿ ಬೈ ಎಲೆಕ್ಷನ್‌ನಲ್ಲಿ ಉಡುಪಿ ಮಠದ ಪೀಠಾಧಿಪತಿಗಳ ಕಾಲಿಡಿದರು. ಹೀಗೆ ಸಿದ್ದರಾಮಯ್ಯಗೆ ಒಳಗೊಂದು ಹೊರಗೊಂದು ಎಂಬಂತೆ ಡಬಲ್ ಸ್ಟ್ಯಾಂಡ್ ಹೊಂದಿದ್ದಾರೆ ಎಂದು ಎಚ್. ವಿಶ್ವನಾಥ್ ತಿಳಿಸಿದರು.



