ಮೈಸೂರು: ಸಿದ್ದರಾಮಯ್ಯ ಅವರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪರದಾಡುತ್ತಿದೆ. ಇದರ ಬದಲು ಎಲ್ಲಿ, ಯಾವ ಕ್ಷೇತ್ರದಲ್ಲಿ ಸಮಸ್ಯೆಗಳು ಇವೆಯೋ ಅದಕ್ಕೆ ಪರಿಹಾರ ಕಂಡುಕೊಂಡಿದ್ದರೇ ಸಾಕಾಗಿತ್ತು ಎಂದು ಎಂಎಲ್ಸಿ ಎಚ್ ವಿಶ್ವನಾಥ್ ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯುದ್ದೇಶಿಸಿ ಮಾತನಾಡಿದ ಎಚ್ ಅವರು, ಈ ಎಲ್ಲಾ ಗ್ಯಾರಂಟಿಗಳ ಬದಲು ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಬೇಕಿತ್ತು. ೧ ರಿಂದ ೧೨ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡುವ ಕೆಲಸ ಮಾಡಬೇಕಿತ್ತು. ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿ ಪೋಷಕರು ಪರದಾಡುತ್ತಾರೆ. ಉಚಿತ ಆರೋಗ್ಯದ ಜೊತೆಗೆ ಉಚಿತ ಶಿಕ್ಷಣ ನೀಡಬೇಕಿತ್ತು. ಗ್ಯಾರಂಟಿ ಯೋಜನೆಗಳ ಬದಲು ಎಲ್ಲರಿಗೂ ಉಚಿತ ಶಿಕ್ಷಣ ಯೋಜನೆ ಜಾರಿಗೊಳಿಸಲಿ. ೬೫ ಸಾವಿರ ಕೋಟಿ ಖರ್ಚು ಮಾಡಿ ಅದಕ್ಕೊಬ್ಬ ಉಸ್ತುವಾರಿ, ಜಿಲ್ಲೆಗೊಬ್ಬ ಉಸ್ತುವಾರಿ ಕೊಟ್ಟು ಹಣ ದುರುಪಯೋಗ ಮಾಡುತ್ತಿರುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ವತಿಯಿಂದ ಯಾವುದೇ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಖಾಲಿ ಹುದ್ದೆಗಳನ್ನು ತುಂಬುವ ಬದಲು, ಹೊರ ಗುತ್ತಿಗೆ ಆಧಾರದ ಮೇಲೆ ಸಂಬಳ ನೀಡಿ ಕೆಲಸ ಮಾಡಿಸುತ್ತಿದ್ದಾರೆ. ಇದರ ಟೆಂಡರನ್ನು ಮಂತ್ರಿಗಳ, ರಾಜಕಾರಣಿಗಳ ಸಂಬಂಧಿಕರಿಗೆ ಕೊಟ್ಟಿರುತ್ತಾರೆ. ಲೇಬರ್ ಆಕ್ಟ್ ಪ್ರಕಾರ ೧೮ ಸಾವಿರ ಕೊಡಬೇಕು. ಆದರೆ, ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ನೌಕರನಿಗೆ ಕೊಡೋದೆ ೧೨ ಸಾವಿರ, ಉಳಿದ ೬ ಸಾವಿರ ಗುತ್ತಿಗೆದಾರನಿಗೆ ಹೋಗುತ್ತದೆ. ಇದರಲ್ಲೂ ಸರ್ಕಾರದ ಹಣ ಲೂಟಿ ಮಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಜಿಎಸ್ಟಿ ಎನ್ನುವುದು ಪ್ರತಿ ಹೆಜ್ಜೆಯಲ್ಲೂ ಜನ ಸಾಮಾನ್ಯರಿಗೆ ಬೀಳುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಬುದ್ಧಿವಂತರು, ಆದರೂ ಸರ್ಕಾರದ ನೀತಿ ನಿಯಮಗಳನ್ನೇ ಉಲ್ಲಂಘನೆ ಮಾಡುತ್ತಿದ್ದಾರೆ ಎಂದರು.