Tuesday, April 22, 2025
Google search engine

Homeರಾಜಕೀಯಸಿದ್ದರಾಮಯ್ಯರಿಗೆ ಮಾನ‌ ಮರ್ಯಾದೆ ಇಲ್ಲ: ಪ್ರಹ್ಲಾದ ಜೋಶಿ

ಸಿದ್ದರಾಮಯ್ಯರಿಗೆ ಮಾನ‌ ಮರ್ಯಾದೆ ಇಲ್ಲ: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನ‌ ಮರ್ಯಾದೆ ಇಲ್ಲ. ಹಾಗಂತ ಬೇರೆಯವರಿಗೂ ಇಲ್ಲ ಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಸೋಮವಾರ ಸುದ್ದಿಗಾರರೊಂದೊಗೆ ಮಾತನಾಡಿದ ಅವರು, ನವಲಗುಂದ ಕಾಂಗ್ರೆಸ್ ಕಾರ್ಯಕ್ರಮದ ಭಾಷಣದಲ್ಲಿ ತಮ್ಮ ವಿರುದ್ಧ ಏಕ ವಚನದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದರಾಮಯ್ಯ ಅವರಷ್ಟು ನೀಚತನಕ್ಕೆ ನಾವು ಇಳಿಯುವುದಿಲ್ಲ. ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದ್ದಿರಿ ಹಾಗೆಯೇ ನಾನು ಕೂಡ ಪ್ರಮಾಣವಚನ ಸ್ವೀಕಾರ ಮಾಡಿರುವೆ. ಆಡಳಿತ, ಅಧಿಕಾರ ನಿಮಗೆ ಜಾಸ್ತಿ ಇರಬಹುದು. ಆದರೆ, ಸಂವಿಧಾನದಲ್ಲಿ ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಮಾನರು. ನಾನು ಮಾನ ಮರ್ಯಾದೆ ಬಿಟ್ಟು ವರ್ತನೆ ಮಾಡುವುದಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಯಾವುದೇ ಪೂರ್ವಾಪರ ತಿಳಿದುಕೊಳ್ಳದೆ ಉಡಾಫೆ ಹೊಡಿತಾರೆ. ಕಾಂಗ್ರೆಸ್ ಎಲ್ಲ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆಗೆ ತೊಡಕುಂಟು ಮಾಡಿದೆ. ಸೋನಿಯಾ ಗಾಂಧಿ ಅವರು ಗೋವಾಕ್ಕೆ ಹೋಗಿ ಹನಿ‌ ನೀರು ಕೊಡಲ್ಲ ಎಂದಿದ್ದರು. ಇವರಿಗೆ ಎಷ್ಟು ನಾಲಿಗೆ ಇದೆ. ಕಾಂಗ್ರೆಸ್ ನವರು ವಿವೇಚನ ರಹಿತವಾಗಿ‌ ಮಾತನಾಡುತ್ತಿದ್ದಾರೆ ಎಂದರು.

ಸಿ.ಟಿ ರವಿ ಮತ್ತು ಶೋಭಾ ಕರಂದ್ಲಾಜೆ ಗೋ ಬ್ಯಾಕ್ ವಿಚಾರ, ಕಾಂಗ್ರೆಸ್ ಸ್ವಂತ ಬಲ ಮತ್ತು ಅಭಿವೃದ್ಧಿಯಿಂದ ಗೆಲ್ಲುವುದಿಲ್ಲ. ಆದ್ದರಿಂದ ಈ ರೀತಿಯ ಹೇಳಿಕೆ ನೀಡುತ್ತಿದೆ. ಆ ಪಕ್ಷದ ಷಡ್ಯಂತರಕ್ಕೆ ಜನ ಬಲಿಯಾಗುವುದಿಲ್ಲ ಎಂದರು.

ಮಂಡ್ಯ ಕ್ಷೇತ್ರಕ್ಕೆ ಸುಮಲತಾ ವಿಚಾರವಾಗಿ ಮಾತನಾಡಿ, ಮಂಡ್ಯ ವಿಚಾರದಲ್ಲಿ ಎಲ್ಲರಿಗೂ ಸಮಾಧಾನವಾಗುವ ಪರಿಹಾರ ಕಂಡು ಹಿಡಿಯುತ್ತೇವೆ. ಅಧಿವೇಶನದಲ್ಲಿ ಸುಮಲತಾ ಜೊತೆಗೆ ಮಾತನಾಡಿದ್ದೇನೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಮದುವೆ ಸಂಬಂಧ ಆದ ಕೂಡಲೇ ಎಲ್ಲಾ ಹೊಂದಾಣಿಕೆ ಆಗುವುದಿಲ್ಲ. ದೊಡ್ಡ ಪಕ್ಷಗಳು, ದೊಡ್ಡ ವ್ಯವಸ್ಥೆ, ಕೋಟ್ಯಾಂತರ ಜನ, ಲಕ್ಷಾಂತರ ಜನರ ಹೊಂದಾಣಿಕೆಗೆ ಸಮಯಬೇಕು. ಕುಮಾರಸ್ವಾಮಿ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದರು.

ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಸ್ಪರ್ಧೆ ಮಾಡುವುದು ನಿಶ್ಚಿತ. ಆದರೆ, ಯಾವ ರಾಜ್ಯದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ ಎಂದರು‌.

RELATED ARTICLES
- Advertisment -
Google search engine

Most Popular