ಮೈಸೂರು: ಮೈಸೂರು ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದವರು ಸಿದ್ದರಾಮಯ್ಯರವರಾಗಿರುವುದರಿಂದ ಕೆ.ಆರ್.ಎಸ್. ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆವರಣಕ್ಕೆ ಸಿದ್ದರಾಮಯ್ಯ ಹೆಲ್ತ್ ಹಬ್ ಎಂದು ನಾಮಕರಣ ಮಾಡಲಾಗುವುದು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.
ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಕೆ.ಆರ್. ಆಸ್ಪತ್ರೆಯ ನೆಫ್ರೋ ಯುರಾಲಜಿ ವಿಭಾಗ ಹಾಗೂ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ವತಿಯಿಂದ ನಡೆದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಗೆದ್ದ ಒಂದೇ ವಾರದಲ್ಲಿ ಡಾ.ನರೇಂದ್ರ ರವರು ಬಂದು ಐಎನ್‌ಯು ಯೂನಿಟ್ ಮೈಸೂರಿಗೆ ತರಬೇಕೆಂದು ಒತ್ತಾಯಿಸಿದರು. ನಾನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರಿಂದ ೧೦೦ ಹಾಸಿಗೆ ಸಾಮಥ್ಯದ ಆಸ್ಪತ್ರೆ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಹಣವನ್ನು ಇಟ್ಟಿದ್ದಾರೆ. ಅಲ್ಲದೆ ೩ ಎಕರೆ ಜಾಗವನ್ನು ಸ್ಯಾನಿಟೋರಿಯಂ ಆವರಣದಲ್ಲಿ ನೀಡಿದ್ದಾರೆ.
ಈ ವರ್ಷವೇ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೈಸೂರು ನಗರಕ್ಕೆ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಟ್ರಾಮಾಸೆಂಟರ್ ಹೆರಿಗೆ ಆಸ್ಪತ್ರೆ, ಆಯುರ್ವೇದಿಕ್ ಆಸ್ಪತ್ರೆಗಳನ್ನು ನಿರ್ಮಿಸಿ ಬಡಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಚಾಮರಾಜ ಕ್ಷೇತ್ರಕ್ಕೆ ಮೊದಲ ಬಜೆಟ್‌ನಲ್ಲೇ ೭೦೦ ಕೋಟಿ ರೂ ಅನುದಾನ ಕೊಡುವುದರ ಜೊತೆಗೆ ೭೫ ಕೋಟಿ ರೂಗಳನ್ನು, ಕೆ.ಆರ್. ಆಸ್ಪತ್ರೆಯಲ್ಲಿ ಒಪಿಡಿ ನಿರ್ಮಾಣಕ್ಕೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಡಾ.ಜೆ.ಬಿ. ನರೇಂದ್ರ, ಡಾ ಹೆಚ್.ಪಿ ಶೋಭಾ, ಡಾ.ಶ್ರೀನಿವಾಸ್ ನಲ್ಲೂರ್, ಡಾ.ಹನುಮಂತ ಆಚಾರ್ ಜೋಶಿ, ಡಾ ನಯಾಜ್ ಪಾಷಾ, ಡಾ.ರಾಜೇಂದ್ರ ಪ್ರಸಾದ್, ಡಾ.ಶಶಿಕಿರಣ್, ಡಾ.ಮಾನಸ, ಡಾ.ಸಮರ್ಥ್, ನಂದೀಶ್, ಪ್ರೀತಂ ಹಾಜರಿದ್ದರು.