ಮೈಸೂರು: ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಮೊದಲ ಬಜೆಟ್‌ನಲ್ಲಿ ಮೈಸೂರಿಗೆ ಭರಪೂರ ಕೊಡುಗೆ ನೀಡಿದ್ದು, ಕೆಲ ಹೊಸ, ಹಳೆಯ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ ಅನುದಾನ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಅತ್ಯಾಧುನಿಕ ಕೌಶಲ ಪ್ರಯೋಗಾಲಯ, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯ, ನಗರದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಟ್ರಾಮಾ ಕೇರ್ ಸೆಂಟರ್‌ಗಳ ಕಾರ್ಯಾಚರಣೆಗೆ ೧೫ ಕೋಟಿ ರೂ. ಅನುದಾನ, ಹೊಸದಾಗಿ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ನಿರ್ಮಾಣ ಮಾಡುವ ಘೋಷಣೆ ಮಾಡಿದ್ದಾರೆ. ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಾದೇಶಿಕ ಘಟಕದ ಸೌಲಭ್ಯಗಳ ಸುಧಾರಣೆಗೆ ೧೦ಕೋಟಿ ರೂ. ಮೀಸಲಿಡಲಾಗಿದೆ.
ಮೈಸೂರು ಉತ್ಪನ್ನಗಳಿಗೆ ಉತ್ತೇಜನ: ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ಮೈಸೂರು ವೀಳ್ಯದೆಲೆಗಳು ಜಿಐ ಟ್ಯಾಗ್‌ಗಳನ್ನು ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು ರೇಷ್ಮೆ ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ ರೋಗರಹಿತ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರತಳಿ ರಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ.
ಕಲಾ ಗ್ಯಾಲರಿ: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿನ ಎರಡೂವರೆ ಎಕರೆ ಜಮೀನಿನಲ್ಲಿ ಕರ್ನಾಟಕದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಪ್ರದರ್ಶಿಸಲು ತಂತ್ರಜ್ಞಾನದೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ನಿರ್ಮಾಣ ಘೋಷಿಸಲಾಗಿದೆ. ಇದಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಮಾನವ ವನ್ಯಪ್ರಾಣಿ ಸಂಘರ್ಷದಲ್ಲಿ ಸಂರಕ್ಷಿಸಿದ, ಗಾಯಗೊಂಡ ಅನಾರೋಗ್ಯ ಪೀಡಿತ ಪ್ರಾಣಿಗಳನ್ನು ರಕ್ಷಣೆ, ನಿರ್ವಹಣೆ ಮಾಡುತ್ತಿರುವ ಮೈಸೂರಿನಲ್ಲಿರುವ ಪುನರ್ವಸತಿ ಕೇಂದ್ರಗಳ ಸಾಮರ್ಥ್ಯ ವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳುವ ಯೋಜನೆ ಪ್ರಕಟಿಸಿದ್ದಾರೆ.
ಮೈಸೂರಿನಲ್ಲಿ ಸೈಕ್ಲಿಂಗ್ ವೇಲೋಡ್ರೋಮ್ ಸ್ಥಾಪನೆಗೆ ೧೦ ಕೋಟಿ ಅನುದಾನ ಮೀಸಲಿಡಲಾಗಿದ್ದರೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣವನ್ನು ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲು ಪ್ರಕಟಿಸಲಾಗಿದೆ. ಚಾಮುಂಡಿವಿಹಾರ ಕ್ರೀಡಾಂಗಣದ ಬಳಿ ಎಆರ್ (ಆಗ್ಯೂಮೆಂಟೆಡ್ ರಿಥಿಂಲಿಟಿ) ಮತ್ತು ವಿಆರ್ (ವರ್ಚುವಲ್ ರಿಯಾಲಿಟಿ) ತಂತ್ರಜ್ಞಾನದೊಂದಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪುರಾತತ್ವ ವಸ್ತುಸಂಗ್ರಹಾಲಯ ಮತ್ತು ಕಲಾಗ್ಯಾಲರಿ ನಿರ್ಮಾಣ. ಈ ಯೋಜನೆ ಕುರಿತು ಬಿಜೆಪಿ ಸರ್ಕಾರದ ಬಜೆಟ್‌ನಲ್ಲೂ ಪ್ರಸ್ತಾಪಿಸಲಾಗಿತ್ತು. ಬೆಂಗಳೂರಿನ ಹಲಸೂರಿನಲ್ಲಿರುವ ಗುರುದ್ವಾರದ ಮಾದರಿಯಲ್ಲಿ ಬೃಂದಾವನ ಬಡಾವಣೆಯ ಗುರುದ್ವಾರ ಅಭಿವೃದ್ಧಿಪಡಿಸಲು ೫ ಕೋಟಿ ರೂ.ಮೀಸಲಿಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಬಹುಪಾಲು ಹಣಕಾಸು ಗ್ಯಾರೆಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ. ಉಳಿದಂತೆ ಇತರ ಯೋಜನೆಗಳನ್ನು ಕೇವಲ ನೆಪಮಾತ್ರಕ್ಕೆ ಘೋಷಿಸಲಾಗಿದೆ. ಚಲಚಿತ್ರ ನಗರಿ ನಿರ್ಮಾಣ ಯೋಜನೆ ಹಳೆಯದು, ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರವನ್ನು ದೆಹಲಿಯ ಪ್ರಗತಿ ಮೈದಾನ ಮಾದರಿ ಅಭಿವೃದ್ಧಿಗೊಳಿಸುವ ಯೋಜನೆ ಹೊಸತೇನಲ್ಲ. ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಪುರಾತತ್ವ ಇಲಾಖೆಯ ಸುಪರ್ದಿನಲ್ಲಿರುವ ಎರಡೂವರೆ ಎಕರೆ ಜಮೀನಿನಲ್ಲಿ ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ನಿರ್ಮಾಣದ ಘೋಷಣೆ ಮಾಡಲಾಗಿದೆ. ಇದೂ ಕೂಡ ಚಲನಚಿತ್ರ ನಗರದಂತೆ ಮತ್ತೆ ನೆನಗುದಿಗೆ ಬೀಳದಿದ್ದರೆ ಸಾಕು.
- ಟಿ.ಎಸ್.ಶ್ರೀವತ್ಸ, ಶಾಸಕ
ಎಪಿಎಂಸಿ ಕಾಯ್ದೆ ವಾಪಾಸ್ ಪಡೆದಿರುವುದು ಸ್ವಾಗತಾರ್ಹ. ಆದರೆ, ತರಕಾರಿ ಮಾರುಕಟ್ಟೆಗಳಲ್ಲಿ ೫೦ ಶೀತಲಿಕರಣ ಘಟಕ ಆರಂಭ ಹಾಗೂ ಮಂಡ್ಯ ಮೈಶುಗರ್ ಕಾರ್ಖಾನೆ ಉನ್ನತೀಕರಣ ಪ್ರಸ್ತಾಪ ಮಾಡಿಲ್ಲ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದಾಗಬೇಕು. ರಾಜ್ಯದ ಕಬ್ಬು ಬೆಳೆಗಾರರಿಗೆ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರುವುಗೊಳಿಸಿ ರೈತರಿಗೆ ಹಣ ಕೊಡಿಸಬೇಕು. ಅನ್ನ ಭಾಗ್ಯ ಯೋಜನೆಗೆ ೧೦,೦೦೦ ಕೋಟಿ ಮೀಸಲಿಟ್ಟ ಹಣದಿಂದ ರಾಜ್ಯದ ರೈತರಿಂದಲೇ ಆಕ್ಕಿ ರಾಗಿ ಜೋಳ ಖರೀದಿ ಮಾಡಬೇಕೆಂಬುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಕೃಷಿ ಉಪಕರಣಗಳ ಮೇಲೆ ಜಿಎಸ್‌ಟಿ ರದ್ದು ಮಾಡಿಲ್ಲ.
- ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ.
ಗ್ಯಾರಂಟಿ ಯೋಜನೆ ಜಾರಿಗೆ ಸ್ವಾಗತ. ಪೌಷ್ಠಿಕ ಆಹಾರವನ್ನು ೬ ರಿಂದ ೧೨ ತಿಂಗಳಿಗೆ ವಿಸ್ತರಣೆ ಮಾಡಿರುವುದು ಸ್ವಾಗತಾರ್ಹ. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಗೃಹಲಕ್ಷ್ಮಿ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಆದರೆ, ಬೆಲೆ ಏರಿಕೆ ನಿಯಂತ್ರಣಕ್ಕೆ ಮುಂದಾಗಿಲ್ಲ. ಉದ್ಯೋಗ ಸೃಷ್ಠಿ ಹಾಗೂ ಕೃಷಿಗೆ ಬೆಂಬಲ ಬೆಲೆ ಘೋಷಿಸಿಲ್ಲದಿರುವುದು ಸರಿಯಲ್ಲ.
-ಬಿ.ರವಿ, ಜಿಲ್ಲಾ ಕಾರ್ಯದರ್ಶಿ, ಎಸ್‌ಯುಸಿಐ(ಸಿ)
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ರಾಜ್ಯದ ಜನತೆಗೆ ನಿರಾಶಾದಾಯಕವಾಗಿದೆ. ಅಲ್ಪಸಂಖ್ಯಾತರ ಓಲೈಕೆಗೆ ಹೆಚ್ಚು ಒತ್ತು ನೀಡಿ ಬಹುಸಂಖ್ಯಾತ ಹಿಂದುಗಳಿಗೆ ಚೆಂಬು ನೀಡಿದ್ದಾರೆ. ಅಲ್ಪಸಂಖ್ಯಾತ ಕ್ರಿಶ್ಚಿಯನ್‌ರಿಗೆ ಅಭಿವೃದ್ಧಿ ನಿಗಮ, ಮುಸ್ಲಿಮರಿಗೆ ಶಾದಿ ಮಹಲ್‌ಗಳ ಭರಪೂರ ಕೊಡುಗೆ ನೀಡಿ ಹಿಂದೂಗಳಿಗೆ ದ್ರೋಹ ಬಗೆದಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಇಲ್ಲ. ಯುವಜನತೆಗೆ ಉದ್ಯೋಗ ಸೃಷ್ಟಿಸುವ ಯೋಜನೆಯಿಲ್ಲ. ಯಾವುದೇ ವಸ್ತುಗಳ ಬೆಲೆ ಇಳಿಸುವ ಪ್ರಯತ್ನ ಮಾಡದೆ ನಾಡಿನ ಜನತೆಗೆ ದ್ರೋಹ ಬಗೆದ ಬಜೆಟ್ ಇದಾಗಿದೆ.
-ಡಾ.ಕೆ.ವಸಂತ ಕುಮಾರ್, ಬಿಜೆಪಿ ಜಿಲ್ಲಾ ಸಹ ವಕ್ತಾರ
ವಿದ್ಯುತ್ ದರ ಏರಿಕೆಯಾಗಿರುವ ಹಿನ್ನೆಲೆ ವಿದ್ಯುತ್ ತೆರಿಗೆ ದರ ಶೇ.೯ರಿಂದ ಶೇ.೩ರಷ್ಟು ಇಳಿಸಲು ಸಲ್ಲಿಸಿದ ಬೇಡಿಕೆ ಈಡೇರಲಿಲ್ಲ. ಮೈಸೂರು ಕೈಗಾರಿಕೆ ಪಟ್ಟಣ ಪ್ರಾಧಿಕಾರ ರಚನೆ ಹಾಗೂ ಮೈಸೂರು ರಫ್ತು ಕೇಂದ್ರಕ್ಕೆ ಅಗತ್ಯವಾದ ಸರ್ಕಾರದ ಪಾಲು ೨ ಕೋಟಿ ರೂ. ಪ್ರಕಟಿಸಲಿಲ್ಲ. ಉzಶಿತ ಚಿತ್ರನಗರಿ ನಿರ್ಮಾಣಕ್ಕೆ ಹಣ ಘೋಷಿಸಿಲ್ಲ. ಕಿದ್ವಾಯಿ ಪ್ರಾದೇಶಿಕ ಘಟಕದ ಸುಧಾರಣೆಗೆ ನೀಡಿರುವ ಹಣ ಒಂದು ಉಪಕರಣಕ್ಕೂ ಸಾಲದು. ಒಟ್ಟಾರೆ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ.
- ವಾಸು, ಮೈಸೂರು ಕೈಗಾರಿಕೆಗಳ ಸಂಘ.
ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಬಜೆಟ್ ಇದಾಗಿದೆ. ಬೆಲೆ ಏರಿಕೆ, ಉದ್ಯೋಗ ಸೃಷ್ಟಿಯ ಬಗ್ಗೆ ಪ್ರಸ್ತಾಪವಿಲ್ಲ. ಕೃಷಿ ಕ್ಷೇತ್ರ ಕಡೆಗಣಿಸಲಾಗಿದ್ದು, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರಸಗೊಬ್ಬರಗಳಿಗೆ ಸಬ್ಸಿಡಿ ಘೋಷಿಸಿಲ್ಲ. ಒಟ್ಟಾರೆ ರಾಜ್ಯ ಬಜೆಟ್ ನೀರಸವಾಗಿದೆ.
-ನರಸಿಂಹಸ್ವಾಮಿ, ಜೆಡಿಎಸ್ ಜಿಲ್ಲಾಧಕ್ಷ
ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪP ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರೆಂಟಿ ಯೋಜನೆಗಳಿಗೆ ೫೨ ಸಾವಿರ ಕೋಟಿ ಮೀಸಲಿಟ್ಟಿದೆ. ಜತೆಗೆ ರೈತರ ಮರಣ ಶಾಸನವಾಗಿದ್ದ ಕೇಂದ್ರದ ಎಪಿಎಂಸಿ ಕಾಯ್ದೆಯನ್ನು ಕರ್ನಾಟಕ ರಾಜ್ಯದಲ್ಲಿ ವಾಪಸ್ ಪಡೆಯುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿಶೇಷ ಕಲ್ಯಾಣಕ್ಕಾಗಿ ೩೪,೨೯೪ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ಕಳೆದ ವರ್ಷಕ್ಕಿಂತ ೪,೦೭೯ ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ನೀಡಲಾಗಿದೆ. ಎನ್‌ಇಪಿ ರದ್ದು ಮಾಡಿರುವುದಲ್ಲದೇ ರೈತರಿಗೆ ನೀಡುತ್ತಿರುವ ಶೂನ್ಯ ಬಡ್ಡಿ ದರದ ಸಾಲವನ್ನು ೩ ಲPದಿಂದ ೫ ಲPಕ್ಕೆ ಏರಿಕೆ ಮಾಡಿ ರೈತರಿಗೆ ನೈತಿಕ ಬಲ ತುಂಬಿದೆ. ಮೂಲ ಸೌಕರ್ಯಗಳ ಜತೆಗೆ ನೀರಾವರಿ, ಕೈಗಾರಿಕೆ ಹಾಗೂ ರಾಜ್ಯದ ಆರ್ಥಿಕ ಸದೃಢತೆಗೆ ಸಿದ್ದರಾಮಯ್ಯನವರ ಸರ್ಕಾರ ವೈeನಿಕ ತಳಹದಿಯ ಪರಿಪೂರ್ಣ ಬಜೆಟ್ ಮಂಡಿಸಿದೆ.
– ಡಾ.ಬಿ.ಜೆ.ವಿಜಯ್ ಕುಮಾರ್, ಅಧಕ್ಷ ಮೈಸೂರು ಜಿ ಕಾಂಗ್ರೆಸ್ ಸಮಿತಿ.
ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಘೋಷಣೆ: ಹಲವು ವರ್ಷಗಳಿಂದ ಸಾರ್ವಜನಿಕರ ಬಹುಬೇಡಿಕೆಯಾಗಿದ್ದ ಚಾಮುಂಡಿಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂಬ ಕನಸು ಕೊನೆಗೂ ನನಸಾಗಿದೆ.
ಶ್ರೀಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಬಲವಾಗಿ ಕೇಳಿ ಬಂದರೂ ರಚನೆಯಾಗಿರಲಿಲ್ಲ. ಆದರೆ, ಜಿಲ್ಲೆಯವರೇ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಆಯವ್ಯಯದಲ್ಲಿ ಘೋಷಣೆ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟಕ್ಕೆ ಪ್ರತ್ಯೇಕವಾದ ಪ್ರಾಧಿಕಾರ ರಚನೆ ಮಾಡಿರುವುದು ವಿಶೇಷವಾಗಿದೆ. ಕೇಂದ್ರಸರ್ಕಾರ ಪ್ರಸಾದ್ ಯೋಜನೆಯಡಿ ೮೫ ಕೋಟಿ ರೂ. ನೀಡಿರುವ ಹೊತ್ತಲ್ಲೇ ರಾಜ್ಯಸರ್ಕಾರ ಪ್ರಾಧಿಕಾರ ರಚನೆ ಮಾಡಿರುವುದರಿಂದ ತುಂಬಾ ಅನುಕೂಲವಾಗಲಿದೆ.
೨೦೧೫-೧೬ನೇ ಸಾಲಿನ ಆಯವ್ಯಯದಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿ ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರ್ಕಾರವು ಮೈಸೂರಿನಿಂದ ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ, ಇಲ್ಲಿಯವೆಗೂ ಅನುಷ್ಠಾನಗೊಳಿಸಿರಲಿಲ್ಲ. ಈಗ ಸರ್ಕಾರ ಹಿಂದೆ ಘೋಷಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವುದನ್ನು ಘೋಷಿಸಲಾಗಿದೆ. ಹೀಗಾಗಿ, ಚಿತ್ರನಗರಿ ಸ್ಥಳಾಂತರದ ಊಹಾಪೋಹಗಳಿಗೆ ತೆರೆ ಬೀಳುವ ಜತೆಗೆ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿ ತಲೆ ಎತ್ತುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ.
ಮೈಸೂರಿನ ಹೃದಯ ಭಾಗದಲ್ಲಿರುವ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣವನ್ನು ದೆಹಲಿಯ ಪ್ರಗತಿ ಮೈದಾನದ ಮಾದರಿಯಲ್ಲಿ ಮೇಲ್ದರ್ಜೆಗೇರಿಸುವುದನ್ನು ಪ್ರಕಟಿಸಲಾಗಿದೆ. ಸಿದ್ದರಾಮಯ್ಯ ಅವರು ಉಪ ಉಪಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಹಲವಾರು ಹೊಸ ಯೋಜನೆಗಳನ್ನು ರೂಪಿಸಿ ವಸ್ತು ಪ್ರದರ್ಶನಕ್ಕೆ ಹೊಸರೂಪ ನೀಡಿದ್ದರು. ಇದೀಗ ದೆಹಲಿ ಮೈದಾನದ ಮಾದರಿಯಲ್ಲಿ ವಸ್ತು ಪ್ರದರ್ಶನ ಅಭಿವೃದ್ದಿಪಡಿಸುವುದನ್ನು ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ವರ್ಷಪೂರ್ತಿ ವಸ್ತು ಪ್ರದರ್ಶನ ನಡೆಸಲು ಸಹಕಾರಿಯಾಗಲಿದೆ.