ಬೆಂಗಳೂರು: ಸಿದ್ದರಾಮಯ್ಯನವರು ಈಗ ಸಿಕ್ಕಿಬಿದ್ದಿದ್ದಾರೆ. ಜಗ್ಗೋಲ್ಲ, ಬಗ್ಗೋಲ್ಲ, ಏನೇ ಬಂದ್ರೂ ಎದುರಿಸ್ತೀನಿ ಎಂದವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ಯಾಕೆ ಬಗ್ಗಿದ್ಯಾಕೆ ರಾತ್ರೋರಾತ್ರಿ ಜಗ್ಗಿದ್ದು, ಬಗ್ಗಿದ್ದು ಯಾಕೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದರಿಂದ ಅವರ ಕಪಟತನ ಎಂಥದ್ದೆಂದು ಅರ್ಥವಾಗುತ್ತದೆ. ನಿನ್ನೆ ೧೪ ಸೈಟ್ ಸರೆಂಡರ್ ಮಾಡಿದ್ದಾಗಿ ಲೆಟರ್ ಕೊಟ್ಟಿದ್ದಾರೆ. ಆ ಪತ್ರದಲ್ಲಿ ದಿನಾಂಕವೂ ಇಲ್ಲ; ಆದ್ದರಿಂದ ಅದು ಖಾತ್ರಿಯೇನಲ್ಲ ಎಂದು ತಿಳಿಸಿದರು.
ಕಳೆದ ಬಾರಿ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಳವಾಗಿದ್ದ ಹುಬ್ಲೋಟ್ ವಾಚ್ ವಿಚಾರ ಬಂದಿತ್ತು. ಅದೊಂದು ಹಗರಣವಾಗಿತ್ತು. ಅದು ದುಡ್ಡು ಕೊಟ್ಟು ಕೊಂಡದ್ದೆಂದು ಮೊದಲು ಹೇಳಿದ್ದರು. ಸ್ವಲ್ಪ ದಿನದ ಬಳಿಕ ಸ್ನೇಹಿತರಿಂದ ಉಡುಗೊರೆ ಎಂದಿದ್ದರು. ನಂತರ ಕಳವು ಮಾಲೆಂದು ಗೊತ್ತಾಗಿತ್ತು. ಇದರಿಂದ ಕಷ್ಟ ಅನುಭವಿಸಬೇಕಾಗಬಹುದೆಂದು ಅದನ್ನು ಸರೆಂಡರ್ ಮಾಡಿದ್ದರು ಎಂದು ವಿವರಿಸಿದರು.