ಬೆಂಗಳೂರು: ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಕಾನೂನು ಸಮರಕ್ಕೆ ತೊಡೆ ತಟ್ಟಿ ನಿಂತಿರುವ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಬಲ ಸಿಕ್ಕಿದೆ. ಹೈಕಮಾಂಡ್ ಕೂಡಾ ನೀವು ಕಾನೂನು ಹೋರಾಟ ನಡೆಸಿ, ಹೈಕಮಾಂಡ್ ನಿಮ್ಮ ಜೊತೆಗಿರುತ್ತೆ ಅಂತಾ ಸೂಚನೆ ಕೊಟ್ಟಿದೆ.
ಇದರ ಬೆನ್ನಲ್ಲೇ ಸಿದ್ದರಾಮಯ್ಯನವರು ಇಂದು (ಆಗಸ್ಟ್ 18) ಕಾವೇರಿ ನಿವಾಸದಲ್ಲಿ ಕೆಲ ಆಪ್ತ ಸಚಿವರು, ವಕೀಲರು ಜತೆ ಸಮಾಲೋಚನೆ ನಡೆಸಿದ್ದು, ಅಂತಿಮವಾಗಿ ಹೈಕೋರ್ಟ್ ಮೆಟ್ಟಿಲೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಹೀಗಾಗಿಯೇ ನಾಳೆಯೇ(ಆಗಸ್ಟ್ 19) ಸಿಎಂ ಪರವಾಗಿ ಅಭಿಷೇಕ್ ಮನು ಸಿಂಘ್ವಿ, ಸಿಬಲ್ ಅವರು ಹೈಕೋರ್ಟ್ ಅರ್ಜಿ ಸಲ್ಲಿಸಲಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ನಾಳಿನ ಮಂತ್ರಾಲಯ ಪ್ರವಾಸ ರದ್ದು ಮಾಡಿದ್ದಾರೆ.
ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲೂ ಸಚಿವರೂ ಒಮ್ಮತದ ಬೆಂಬಲ ನೀಡಿದ್ದಾರೆ. ಕ್ಯಾಬಿನೆಟ್ ಬಳಿಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ತೆರಳಿದ್ದ ಸಿಎಂ-ಡಿಸಿಎಂ ಪ್ರಕರಣದ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ರಾಜ್ಯಪಾಲರ ನಡೆ ಪ್ರಶ್ನಿಸಿದ ಕಾನೂನು ಹೋರಾಟ ಮಾಡಲು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಬಳಿಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದಾರೆ.
ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಿವಾಸ ಫುಲ್ ಬ್ಯುಸಿಯಾಗಿದೆ. ಇವತ್ತೂ ಕೂಡಾ ಸಚಿವರ ದಂಡು ಸಿಎಂ ನಿವಾಸಕ್ಕೆ ಆಗಮಿಸಿ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿದೆ. ಸಚಿವರಾದ ಕೃಷ್ಣಬೈರೇಗೌಡ ,ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಸಿಎಂ ಜೊತೆ ಚರ್ಚಿಸಿದ್ದಾರೆ.