ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಶನಿವಾರ ಮೃತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ. ಅಲ್ಲದೆ ನೂರಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿರುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಇದುವರೆಗೆ ಸಿಕ್ಕಿಂನಲ್ಲಿ 26 ಮೃತದೇಹಗಳು ಪತ್ತೆಯಾಗಿದ್ದು, ಪಶ್ಚಿಮ ಬಂಗಾಳದ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ 30 ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು 56 ಮೃತದೇಹಗಳು ಪತ್ತೆಯಾದಂತಾಗಿದೆ ಎಂದು ಹೇಳಿದ್ದಾರೆ.
ಸಿಕ್ಕಿಂ ನಲ್ಲಿ ಸೇನಾ ಸಿಬ್ಬಂದಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಅವರ ಶೋಧಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
23 ಮಂದಿ ಸೇನಾ ಸಿಬಂದಿಗಳಲ್ಲಿ 16 ಮೃತದೇಹಗಳನ್ನು ವಿಪತ್ತು ನಿರ್ವಹಣಾ ಅಧಿಕಾರಿಗಳು ಗುರುತಿಸಿದ್ದು. ಮಂಗನ್ ಜಿಲ್ಲೆಯಿಂದ ನಾಲ್ಕು, ಗ್ಯಾಂಗ್ಟಾಕ್ ನಿಂದ ಆರು ಮತ್ತು ಪಾಕ್ಯೊಂಗ್ ಜಿಲ್ಲೆಯಿಂದ ಏಳು ಭಾರತೀಯ ಸೇನಾ ಸಿಬ್ಬಂದಿ ಸೇರಿದಂತೆ 16 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಉಳಿದವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.
ಅದೇ ರೀತಿ ಪಶ್ಚಿಮ ಬಂಗಾಳ ಸರ್ಕಾರದ ಪ್ರಕಾರ, ಅವರು ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಸಿಲಿಗುರಿ, ಜಲ್ಪೈಗುರಿ ಮತ್ತು ಕೂಚ್ ಬೆಹಾರ್ ಮೂರು ಜಿಲ್ಲೆಗಳಿಂದ 30 ಶವಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರ ನಡುವೆ ಪ್ರವಾಹದಲ್ಲಿ ಯುದ್ಧಸಾಮಗ್ರಿ ಸೇರಿದಂತೆ ಮಿಲಿಟರಿ ಉಪಕರಣಗಳು ಕೊಚ್ಚಿಹೋಗಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.