ರಾಮನಗರ: ರೇಷ್ಮೆ ನಾಡು ಎಂದೇ ಖ್ಯಾತಿ ಗಳಿಸಿರುವ ರಾಮನಗರ ಜಿಲ್ಲೆಯಲ್ಲಿ ೨೮,೪೯೪ ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿಯನ್ನೇ ಅವಲಂಬಿಸಿದ್ದಾರೆ. ೨೧,೫೪೪ ಹೆಕ್ಟೇರ್ ವಿಸ್ತೀರ್ಣದಲ್ಲಿ ರೇಷ್ಮೆ ಕೃಷಿ ವಿಸ್ತರಣೆಯಾಗಿದ್ದು, ಇದರಲ್ಲಿ ಜಿಲ್ಲೆಯ ೦೪ ತಾಲ್ಲೂಕುಗಳ ೧೩,೪೯೦ ಎಕರೆ ಪ್ರದೇಶವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯೇ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಅವರು ತಿಳಿಸಿದರು.
ಅವರು ಆ. ೯ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರೇಷ್ಮೆ ಬೆಳೆಗಾರರೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೇಷ್ಮೆ ಇಲಾಖೆಯಿಂದ ಸಿಗುವ ಸವಲತ್ತುಗಳ ಕುರಿತು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ೧೦ ವರ್ಷಗಳಿಂದ ೧೧೧.೫೩ ಕೋಟಿ ರೂ.ಗಳನ್ನು ಗ್ರಾಮೀಣ ಪ್ರದೇಶದಲ್ಲಿರುವ ರೇಷ್ಮೆ ಬೆಳೆಗಾರರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಕೂಲಿ ವೆಚ್ಚ ಮತ್ತು ಸಾಮಾಗ್ರಿ ವೆಚ್ಚದ ಮೂಲಕ ಪಾವತಿ ಮಾಡಿ ೩೪,೭೬,೪೬೪ ಮಾನವ ದಿನಗಳನ್ನು ಜಿಲ್ಲೆಯ ರೇಷ್ಮೆ ಇಲಾಖೆಯಿಂದಲೇ ಸೃಜಿಸಲಾಗಿರುತ್ತದೆ ಎಂದರು.
ರೇಷ್ಮೆ ಇಲಾಖೆಯಿಂದ ನರೇಗಾ ಯೋಜನೆಯಡಿ ೦೩ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಅದರಲ್ಲಿ ಹಿಪ್ಪುನೇರಳೆ ನರ್ಸರಿ ಸ್ಥಾಪನೆಗೆ ೧,೩೯,೯೭೦ ರೂ.ಗಳು, ಹೊಸ ಹಿಪ್ಪುನೇರಳೆ ನಾಟಿ ಸ್ಥಾಪನೆಗೆ ೧,೪೩,೬೮೦ ರೂ.ಗಳು ಮತ್ತು ಹಿಪ್ಪುನೇರಳೆ ಮರಗಡ್ಡಿ ಸ್ಥಾಪನೆಗೆ ೬೬,೪೫೪ ರೂ.ಗಳ ಮೊತ್ತವನ್ನು ಕೂಲಿ ಮತ್ತು ಸಾಮಾಗ್ರಿ ವೆಚ್ಚದ ಮೂಲಕ ನಿಯಮಾನುಸಾರವಾಗಿ ಪಾವತಿಸಲಾಗಿರುತ್ತದೆ. ಇದರಿಂದ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿರುವ ರೇಷ್ಮೆ ಬೆಳೆಗಾರರು ಹಾಗೂ ಕೂಲಿ ಕಾರ್ಮಿಕರಿಗೆ ಆಯಾ ಗ್ರಾಮಗಳಲ್ಲೇ ಉದ್ಯೋಗ ದೊರೆತಂತಾಗಿದ್ದು, ಈ ಸೌಲಭ್ಯವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ರೇಷ್ಮೆ ಬೆಳೆಗಾರರು ಸದುಪಯೋಗ ಪಡೆದುಕೊಂಡು ರೇಷ್ಮೆ ಕೃಷಿಯನ್ನು ವಿಸ್ತರಿಸುವಂತೆ ಅವರು ಕೋರಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಸಿ.ಡಿ. ಬಸವರಾಜು, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಪಿ.ಉಮೇಶ್, ನರೇಗಾ ಯೋಜನಾ ನಿರ್ದೇಶಕ ಮಂಜುನಾಥ್, ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್ ಹಾಗೂ ಕಾರ್ಯದರ್ಶಿ ರವಿ.ಕೆ ಭಾಗವಹಿಸಿದ್ದರು.