ಚೆನ್ನೈ: ತಿರುವಲ್ಲೂರು ಜಿಲ್ಲೆಯಲ್ಲಿ ನಡೆದ ಹಾವು ಕಡಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಜನ್ಮಕೊಟ್ಟ ಮಕ್ಕಳೇ ಇನ್ಶುರೆನ್ಸ್ ಹಣಕ್ಕಾಗಿ ಹಾವು ಬಿಟ್ಟು ತಂದೆಯನ್ನ ಹತ್ಯೆ ಮಾಡಿಸಿರೋದು ಎಸ್‌ಐಟಿ ತನಿಖೆಯಲ್ಲಿಬಯಲಾಗಿದೆ.
ಆರಂಭದಲ್ಲಿ ಇದು ಹಾವು ಕಡಿತದಿಂದ ಆಗಿರುವ ಸಹಜ ಪ್ರಕರಣ ಅಂತ ಭಾವಿಸಲಾಗಿತ್ತು. ಆದ್ರೆ, ಇನ್ಶುರೆನ್ಸ್ ಕಂಪನಿ ಹಣ ನೀಡುವ ಪ್ರಕ್ರಿಯೆ ವೇಳೆ ಅನುಮಾನ ವ್ಯಕ್ತವಾಯಿತು. ಬಳಿಕ ವಿಶೇಷ ತನಿಖಾ ತಂಡ ಪ್ರಕರಣ ಕೈಗೆತ್ತಿಕೊಂಡಿತು ಎಂದು ವರದಿಗಳು ತಿಳಿಸಿವೆ.
ಸರ್ಕಾರಿ ಶಾಲೆಯೊಂದರಲ್ಲಿ ಪ್ರಯೋಗಾಲಯದ ಸಹಾಯಕರಾಗಿದ್ದ ಇ.ಪಿ ಗಣೇಸನ್ (56) ಕಳೆದ ಅಕ್ಟೋಬರ್‌ನಲ್ಲಿ ಪೋಥತುರ್ಪೇಟೆ ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದರು. ಕುಟುಂಬಸ್ಥರು ಹಾವು ಕಡಿತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಹಾಗಾಗಿ ಪೊಲೀಸರು ಕೂಡ ಇದು ಆಕಸ್ಮಿಕ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದರು.
ವಿಮೆ (ಇನ್ಶುರೆನ್ಸ್) ಪ್ರಕ್ರಿಯೆಗೊಳಿಸುವಾಗ ಕಂಪನಿಯು ಗಣೇಸನ್ ತಮ್ಮ ಮೇಲೆ ತೆಗೆದುಕೊಂಡಿದ್ದ ಬಹುಮೌಲ್ಯದ ಪಾಲಿಸಿಗಳನ್ನ ಗಮನಿಸಿತು. ಈ ಸಂದರ್ಭದಲ್ಲಿ ಫಲಾನುಭವಿಗಳ ನಡವಳಿಕೆಯನ್ನೂ ಗಮನಿಸಿ, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿತು. ಬಳಿಕ ವಿಮಾದಾರರು ಉತ್ತರ ವಲಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಆಸ್ರಾ ಗಾರ್ಗ್ ಅವರಿಗೆ ಮಾಹಿತಿ ನೀಡಿ, ತನಿಖೆಗೆ ಮನವಿ ಮಾಡಿತು. ತನಿಖೆ ಬಳಿಕ ಮಕ್ಕಳೇ ಹಾವು ಕಚ್ಚಿಸಿ ಕೊಂದಿರುವುದು ಗೊತ್ತಾಗಿದೆ.
ಘಟನೆಗೆ ಪ್ರತಿಕ್ರಿಯಿಸಿರುವ ತಿರುವಲ್ಲೂರಿನ ಎಸ್ಪಿ ವಿವೇಕಾನಂದ ಶುಕ್ಲಾ, ಗಣೇಸನ್ ಹೆಸರಿನಲ್ಲಿ 3 ಕೋಟಿ ರೂಪಾಯಿ ಇನ್ಶುರೆನ್ಸ್ ಮಾಡಿಸಲಾಗಿತ್ತು. ಇದನ್ನ ತಿಳಿದ ಇಬ್ಬರು ಮಕ್ಕಳು, ಹಾವುಕಚ್ಚಿಸಿ ಹತ್ಯೆಗೆ 2 ಬಾರಿ ಸಂಚು ರೂಪಿಸಿದ್ರು.
ಮೊದಲಿಗೆ ಸಹಚರರೊಟ್ಟಿಗೆ ಸೇರಿಕೊಂಡು ಒಂದು ನಾಗರಹಾವನ್ನ ಖರೀದಿ ಮಾಡಿದ್ದರು. ನಾಗರ ಹಾವಿನಿಂದ ಕಾಲಿಗೆ ಕಚ್ಚಿಸಿದ್ದರು. ಆದ್ರೆ ಅದು ಹೆಚ್ಚು ಪರಿಣಾಮ ಬೀರಲಿಲ್ಲ, ಹೇಗೋ ಬಚಾವಾಗಿದ್ದರು. ಇದಿಷ್ಟಕ್ಕೆ ಸುಮ್ಮನೆ ಕೂರದ ಮಕ್ಕಳು ಮತ್ತೊಮ್ಮೆ ಸಂಚು ರೂಪಿಸಿದ್ರು. 2ನೇ ಬಾರಿ ಇನ್ನೂ ಅತ್ಯಂತ ವಿಷಕಾರಿ ಕ್ರೈಟ್ ಸ್ನೇಕ್ (ಕಟ್ಟು ಹಾವು) ತಂದರು. ಬೆಳಗ್ಗಿನ ಜಾವ ಕುತ್ತಿಗೆಗೆ ಕಚ್ಚುವಂತೆ ಮಾಡಿದ್ರು, ಹಾವು ಕಚ್ಚಿದ ನಂತರ ಅದು ಆಕಸ್ಮಿಕ ಘಟನೆಯಂತೆ ಬಿಂಬಿಸಲು ಹಾಗೂ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದರು.
ಹಾವು ಕಚ್ಚಿದ ಬಳಿಕ ಆಸ್ಪತ್ರೆಗೆ ಸಾಗಿಸುವ ನಾಟಕವಾಡಿ ವಿಳಂಬ ಮಾಡಿದ್ದರು. ಇದೆಲ್ಲವೂ ತನಿಖೆ ವೇಳೆ ಬಯಲಾಗಿದೆ. ಸದ್ಯ ಪ್ರಕರಣ ಸಂಬಂಧ ಇಬ್ಬರು ಪುತ್ರರು ಸೇರಿದಂತೆ 6 ಜನರನ್ನ ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.



