Monday, April 21, 2025
Google search engine

Homeಸ್ಥಳೀಯಸರ್ ಎಂವಿ ವಿಶ್ವ ಕಂಡ ಮಹಾ ಮೇಧಾವಿ ಇಂಜಿನಿಯರ್ : ಸಾಹಿತಿ ಬನ್ನೂರು ರಾಜು

ಸರ್ ಎಂವಿ ವಿಶ್ವ ಕಂಡ ಮಹಾ ಮೇಧಾವಿ ಇಂಜಿನಿಯರ್ : ಸಾಹಿತಿ ಬನ್ನೂರು ರಾಜು

ಮೈಸೂರು:ಅಪಾರ ಪರಿಶ್ರಮ,  ಪ್ರಾಮಾಣಿಕತೆ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಕಾಯಕ ಪ್ರಜ್ಞೆ , ದೂರದೃಷ್ಟಿ, ಪೂರ್ವಸಿದ್ಧತೆ, ಬದ್ಧತೆ, ಶಿಕ್ಷಣಪರತೆ, ಮೇಧಾವಿತನ, ಜನಪರ ಕಾಳಜಿ, ದೇಶಾಭಿಮಾನ, ಸ್ವಾಭಿಮಾನ, ನಾಡಾಭಿಮಾನ ಇವುಗಳೆಲ್ಲದರ ಒಟ್ಟು ಮೊತ್ತದಂತಿದ್ದು ಮಹಾಕವಿ ಕಾವ್ಯರ್ಷಿ ಕುವೆಂಪು ಅವರಿಂದಲೇ ಯಂತ್ರರ್ಷಿಯೆಂದು  ಕರೆಸಿ ಕೊಂಡಿದ್ದ ಭಾರತರತ್ನ    ಸರ್ ಎಂ.ವಿಶ್ವೇಶ್ವರಯ್ಯನವರು ವಿಶ್ವ ಕಂಡ ಮಹಾ ಮೇಧಾವಿ ಇಂಜಿನಿಯರ್ ಎಂದು  ಸಾಹಿತಿ  ಬನ್ನೂರು ಕೆ.ರಾಜು ಗುಣಗಾನ ಮಾಡಿದರು.

  ನಗರದ ವಿದ್ಯಾರಣ್ಯಪುರಂನ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ಪ್ರೌಢ ಶಾಲೆ ವಿದ್ಯಾಸಂಸ್ಥೆ ಮತ್ತು ಮೈಸೂರಿನ ಪ್ರತಿಷ್ಠಿತ ಶೈಕ್ಷಣಿಕ ಸೇವಾ ಸಂಸ್ಥೆಗಳಾದ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ  ಶಾಲೆಯ ಆವರಣದಲ್ಲಿ  ಏರ್ಪಡಿಸಿದ್ದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನೋತ್ಸವ  ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಅವರು, ವಿದ್ಯೆಯಿಂದ ಏನು ಬೇಕಾದರೂ ಸಾಧಿಸಬಹುದೆಂದು ಅಕ್ಷರಶಃ ಸಾಧಿಸಿ ತೋರಿಸಿದ ವಿಶ್ವೇಶ್ವರಯ್ಯನವರನ್ನು ಹಾಗೂ ಸಾರ್ವಜನಿಕ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಟಿ.ಎಸ್.ಸುಬ್ಬಣ್ಣ ನವರನ್ನೂ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾದರಿಯಾಗಿಟ್ಟುಕೊಂಡು ಕಲಿಯಬೇಕೆಂದರು.

    ಶಿಕ್ಷಣ ಮತ್ತು ಪ್ರಾಮಾಣಿಕ ಕಾಯಕ ಹಾಗೂ ಕ್ರಿಯಾಶೀಲ ಪರಿಶ್ರಮದಿಂದ ವ್ಯಕ್ತಿಯ ಅಭಿವೃದ್ಧಿಯ ಜೊತೆಗೆ ದೇಶದ ಪ್ರಗತಿ ಸಾಧ್ಯವೆಂದು ನಂಬಿದ್ದ ವಿಶ್ವೇಶ್ವರಯ್ಯನವರು ಅದರಂತೆ ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಹದದ್ಭುತ ಸಾಧನೆಯನ್ನು ಮಾಡಿ ಚರಿತ್ರೆ ನಿರ್ಮಿಸಿದರೆಂದು ಹೇಳಿದ ಬನ್ನೂರು ರಾಜು ಅವರು, ವಿಶೇಷವಾಗಿ ತಾಂತ್ರಿಕ ನೈಪುಣ್ಯತೆಯಲ್ಲಿ ಮಹಾ ಮೇಧಾವಿಯಾಗಿದ್ದ ಸರ್ ಎಂವಿ ಅವರು ಅವತ್ತಿನ ಕಾಲದಲ್ಲಿ ಜಗತ್ತಿನಲ್ಲಿ ಅದುವರೆವಿಗೂ ಯಾರೂ ಮಾಡದ ಊಹೆಗೂ ನಿಲುಕದಂಥ ಅದ್ಭುತಗಳನ್ನು ಸೃಷ್ಟಿಸಿ ಭಾರತದ ಕೀರ್ತಿ ಪತಾಕೆಯನ್ನು ಜಗದೆತ್ತರಕ್ಕೂ ಹಾರಿಸಿ ಬದುಕಿದ್ದಾಗಲೇ ದಂತಕತೆಯಾಗಿದ್ದರೆಂದರು. ಮುಂದುವರಿದು ಮಾತನಾಡಿದ ಅವರು,ವಿದ್ಯೆಗೆ ಬಡವ-ಬಲ್ಲಿದ, ಮೇಲು-ಕೀಳೆಂಬ ಯಾವುದೇ ಭೇದ-ಭಾವವಿಲ್ಲ.

ಆಸಕ್ತಿಯಿಂದ ಕಲಿಯುವವರಿಗೆ ವಿದ್ಯೆಯು ತನ್ನಂತಾನೆ ಸಿದ್ಧಿಸುತ್ತದೆ. ಹಾಗಾಗಿ ಅತ್ಯಂತ ಬಡತನದಿಂದ ಬೆಂದು ಬಳಲಿ ಹೋಗಿದ್ದ ಕುಟುಂಬದಲ್ಲಿ ವಿಶ್ವೇಶ್ವರಯ್ಯ ಜನಿಸಿದರೂ ಕೂಡ ಆಸಕ್ತಿಯಿಂದ ವಿದ್ಯೆಯನ್ನು ಕಲಿತು ವಿದ್ಯೆಯ ಬಲದಿಂದ ವಿಶ್ವವೇ ವಿಸ್ಮಯ ಪಡುವಂತೆ ಸಾಧನೆ ಮಾಡಿ ಜಗತ್ಪ್ರಸಿದ್ಧ ಇಂಜಿನಿಯರ್ ಆಗಿ ದೇಶಕ್ಕೆ ಹೆಮ್ಮೆಯ ಮಗನಾಗಿ ತನ್ಮೂಲಕ ವಿದ್ಯೆಯಿಂದ ಏನು ಬೇಕಾದರೂ ಸಾಧಿಸಬಹುದೆಂದು , ಶಿಕ್ಷಣವೆಂಬುದು ಎಲ್ಲವನ್ನೂ ಕೊಡುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ನೀಡಿ, ಇಂದಿನ ಮತ್ತು ಮುಂದಿನ ಪೀಳಿಗೆ ವಿಶ್ವೇಶ್ವರಯ್ಯನವರ ತತ್ವಾದರ್ಶಗಳನ್ನು ಮಾದರಿಯಾಗಿಟ್ಟುಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ  ದೇಶದ ಭವಿಷ್ಯವನ್ನು ಉಜ್ವಲ ಗೊಳಿಸಬೇಕೆಂದ ಅವರು, ವಿಶ್ವೇಶ್ವರಯ್ಯನವರ ಬದುಕು, ಸಾಧನೆ,ಸಿದ್ಧಿ,ಅವರು ನಡೆದು ಬಂದ ಹೆಜ್ಜೆಗಳನ್ನು ಅರಿತರೆ  ಸಾಕು ಇಡೀ ಜಗತ್ತು ಅಂಗೈನಲ್ಲಿರುತ್ತದೆಂದು ಹೇಳಿದರು. 

 ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್.ಜಿ.ಸೀತಾರಾಂ ಅವರು ಮಾತನಾಡಿ , ಪ್ರತಿಯೊಬ್ಬ ವಿದ್ಯಾರ್ಥಿಗಳೂ ವಿಶ್ವೇಶ್ವರಯ್ಯನವರಂತಾಗಲುಪ್ರಯತ್ನಿಸಬೇಕು.ಮನಸ್ಸು ಪಟ್ಟರೆ ಯಾವುದೂ ಅಸಾಧ್ಯವಲ್ಲವೆಂದು ಹೇಳಿ ಸರ್.ಎಂ.ವಿ ಅವರು ಕನ್ನಂಬಾಡಿ ಕಟ್ಟೆಯನ್ನು ಕಟ್ಟಿದ ಬಗೆಯನ್ನು ಅವರ ಅಭಿವೃದ್ಧಿಯ ಸಾಧನೆಗಳನ್ನು  ಸವಿವರವಾಗಿ ತಿಳಿಸಿ ಕಾವ್ಯರ್ಷಿ ರಾಷ್ಟ್ರ ಕವಿ ಕುವೆಂಪು ಅವರು ಸರ್. ಎಂ.ವಿ ಅವರನ್ನು ‘ಯಂತ್ರರ್ಷಿ’ ಎಂದು ಕರೆದು ಬರೆದಿರುವ ಕವಿತೆಯನ್ನು ವಾಚಿಸಿದರು. ಹಾಗೂ ವಿಶ್ವೇಶ್ವರಯ್ಯನವರ ಜಯಂತಿಯನ್ನು  ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಾದ ಶ್ರೀಲಂಕ ಮತ್ತು ತಾಂಜೀನಿಯ ಸೇರಿದಂತೆ ಅನೇಕ ದೇಶಗಳು ಆಚರಿಸುತ್ತವೆ ಎಂದು ತಿಳಿಸಿಕೊಟ್ಟರು.ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ರಾಂತ ಶಿಕ್ಷಕ  ಎ.ಸಂಗಪ್ಪ ಅವರು ಆಶಯ ನುಡಿಗಳನ್ನಾಡಿದರು.ಇದೇ ವೇಳೆ ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ ಅವರು ಪ್ರಸ್ತುತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ  ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಅಭಿನಯ್ ರವಿಕುಮಾರ್, ಮತ್ತು ಎನ್. ಪ್ರೀತಮ್ ಹಾಗೂ ಆರ್.ಜಗದೀಶ್ ಅವರಿಗೆ ತಲಾ ಒಂದು ಸಾವಿರ ರೂಪಾಯಿಗಳ ನಗದು ಬಹುಮಾನದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

 ಗಾಂಧೀವಾದಿ ಟಿ. ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಟರಾಜ್  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಎಂ.ರಮೇಶ್, ಸಿ.ಕೆ.ಅಹೋಬಲ ಶರ್ಮಾ, ಪಿ.ಮಹದೇವೇಗೌಡ, ಎಸ್.ಸಣ್ಣೆಗೌಡ, ಎಂ.ಗೋಪಾಲಕೃಷ್ಣ , ಪಿ.ಶ್ವೇತಾ ಎಂ.ಆರ್.ಗೌಡ, ಜಿ.ಆರ್.ಆರತಿ, ಎಂ.ಜಿ.  ಭಾಗ್ಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular