ಮುಂಬೈ: ಮಹಾರಾಷ್ಟ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಇರುವ ಎರಡು ಮಕ್ಕಳ ನಿಯಮದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳನ್ನು ಹತ್ಯೆ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ಬಾಲಕಿಯನ್ನು ಪ್ರಾಚಿ (6) ಎಂದು ಗುರುತಿಸಲಾಗಿದ್ದು, ಆರೋಪಿ ಪಾಂಡುರಂಗ ಕೊಂಡ್ಮಂಗಳೆ (28) ಎಂದು ತಿಳಿದು ಬಂದಿದೆ. ಈತ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ ನಿವಾಸಿಯಾಗಿದ್ದು, ಗ್ರಾಮದಲ್ಲಿ ಸೆಲೂನ್ ನಡೆಸುತ್ತಿದ್ದನು.
ಪಾಂಡುರಂಗ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ. ಆದರೆ ಅವನಿಗೆ ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳು ಇದ್ದ ಕಾರಣ, ಮಹಾರಾಷ್ಟ್ರದಲ್ಲಿ ಜಾರಿಯಲ್ಲಿರುವ ಎರಡು ಮಕ್ಕಳ ನಿಯಮದಂತೆ ಚುನಾವಣೆಗೆ ಸ್ಪರ್ಧಿಸಲು ಅನರ್ಹನಾಗಿದ್ದ. ಈ ವಿಚಾರವನ್ನು ತನ್ನ ಸ್ನೇಹಿತ ಹಾಗೂ ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯೊಂದಿಗೆ ಚರ್ಚಿಸಿದ ಬಳಿಕ, ಅವಳಿ ಮಕ್ಕಳಲ್ಲಿ ಹಿರಿಯಳಾದ ಪ್ರಾಚಿಯನ್ನು ಎಲ್ಲಾದರೂ ಬಿಟ್ಟು ಬರಲು ಯೋಜನೆ ರೂಪಿಸಿದ್ದ. ನಂತರ ಆಕೆ ಮರಳಿ ಬಂದರೆ ತೊಂದರೆ ಆಗುತ್ತದೆ ಎಂಬ ಭಯದಿಂದ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ಆಕೆಯನ್ನು ನೂಕಿ ಕೊಲೆ ಮಾಡಿದ್ದಾನೆ.
ಕೆಲವು ದಿನಗಳ ಬಳಿಕ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಪಾಂಡುರಂಗ ಮಗಳು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದ. ಆದರೆ ತನಿಖೆಯ ವೇಳೆ ಸತ್ಯ ಬಹಿರಂಗಗೊಂಡಿದ್ದು, ಮಗಳನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ತಿಳಿಸಿದ್ದಾರೆ. ಪೊಲೀಸರು ಪಾಂಡುರಂಗ ಹಾಗೂ ಸರಪಂಚ್ ಗಣೇಶ್ ಶಿಂಧೆಯನ್ನು ಬಂಧಿಸಿದ್ದು, ಪ್ರಕರಣವು ಜನಮನವನ್ನು ಬೆಚ್ಚಿಬೀಳಿಸಿದೆ.



