ನವದೆಹಲಿ: ಲೋಕಸಭೆಗೆ ಇಂದು ಶನಿವಾರ ಆರನೇ ಹಂತದ ಚುನಾವಣೆ ನಡೆಯುತ್ತಿದ್ದು, ಒಟ್ಟು ೮ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ೫೮ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಬಿಹಾರದ ೮, ಹರಿಯಾಣದ ಎಲ್ಲಾ ೧೦ ಸ್ಥಾನಗಳು, ಜಮ್ಮು ಮತ್ತು ಕಾಶ್ಮೀರದ ೧ ಸ್ಥಾನ, ಜಾರ್ಖಂಡ್‌ನ ೪ ಸ್ಥಾನ, ದೆಹಲಿಯ ಎಲ್ಲಾ ೭ ಸ್ಥಾನಗಳು, ಒಡಿಶಾದಲ್ಲಿ ೬, ಉತ್ತರ ಪ್ರದೇಶದ ೧೪ ಮತ್ತು ಪಶ್ಚಿಮ ಬಂಗಾಳದ ೮ ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಅಖಾಡದಲ್ಲಿ ಒಟ್ಟು ೮೮೯ ಅಭ್ಯರ್ಥಿಗಳಿದ್ದಾರೆ. ೫.೮೪ ಕೋಟಿ ಪುರುಷರು, ೫.೨೯ ಕೋಟಿ ಮಹಿಳೆಯರು, ೫,೧೨೦ ತೃತೀಯ ಲಿಂಗಿಗಳು ಸೇರಿ ಒಟ್ಟು ೧೧.೧೩ ಕೋಟಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. ೮.೯೩ ಲಕ್ಷಕ್ಕೂ ಹೆಚ್ಚು ನೋಂದಾಯಿತ ೮೫+ ವರ್ಷದ, ೨೩,೬೫೯ ೧೦೦ ವರ್ಷಕ್ಕಿಂತ ಮೇಲ್ಪಟ್ಟ ಮತದಾರರು ಮತ ಚಲಾಯಿಸಲಿದ್ದಾರೆ.
ಆರನೇ ಹಂತದ ಮತದಾನಕ್ಕೆ ೧.೧೪ ಲಕ್ಷ ಮತಗಟ್ಟೆಗಳ ನಿರ್ಮಾಣವಾಗಿದ್ದು, ೧೧.೪ ಲಕ್ಷ ಮತಗಟ್ಟೆ ಅಧಿಕಾರಿಗಳ ನೇಮಕ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ಕರೆದೊಯ್ಯಲು ೨೦ ವಿಶೇಷ ರೈಲುಗಳನ್ನು ನಿಯೋಜಿಸಿದ್ದು, ೧೮೪ ವೀಕ್ಷಕರು, ೨,೨೨೨ ಫ್ಲೈಯಿಂಗ್ ಸ್ಕ್ವಾಡ್‌ಗಳ ನೇಮಕ ಮಾಡಲಾಗಿದೆ. ೨೫೭ ಅಂತರಾಷ್ಟ್ರೀಯ ಗಡಿ ಚೆಕ್‌ಪೋಸ್ಟ್‌ಗಳು, ೯೨೭ ಅಂತರ-ರಾಜ್ಯ ಗಡಿ ಚೆಕ್‌ಪೋಸ್ಟ್‌ಗಳು ನಿಯೋಜನೆ ಮಾಡಿದ್ದು, ಚುನಾವಣಾ ಗಲಭೆ ತಡೆಯಲು ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರದ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ.