ನಂದ್ಯಾಲ(ಆಂಧ್ರ ಪ್ರದೇಶ): ಸ್ಕಿಲ್ ಡೆವಲಪ್‌ಮೆಂಟ್ ಹಗರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಬಸ್‌ಗೆ ಪೊಲೀಸರು ಸುತ್ತುವರಿದು ಬಂಧಿಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ರಾತ್ರಿ ನಂದ್ಯಾಲದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಚಂದ್ರಬಾಬು ಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ತಂಗಿದ್ದರು. ಬೆಳಗಿನ ಜಾವ ಎರಡೂವರೆ ಗಂಟೆ ಸುಮಾರಿಗೆ ಅನಂತಪುರ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಬೆಳಗ್ಗೆ ೫.೩೦ ರ ವರೆಗೆ ನಾಯ್ಡು ಅವರನ್ನು ಭೇಟಿ ಆಗಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಪಟ್ಟು ಹಿಡಿದರು. ಬೆಳಗ್ಗೆ ೬ ಗಂಟೆ ಸುಮಾರಿಗೆ ನಾಯ್ಡು ಅವರ ವಾಹನದ ಬಾಗಿಲು ಬಡಿದು ಕೆಳಗಿಳಿಸಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಿಐಡಿ ಜಾಮೀನು ರಹಿತ ಬಂಧನ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಪೊಲೀಸರು ನಸುಕಿನ ಜಾವದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಆರ್‌ಕೆ ಫಂಕ್ಷನ್ ಹಾಲ್‌ಗೆ ಡಿಐಜಿ ಮತ್ತು ಪೊಲೀಸರ ತಂಡ ಬಂದಿತ್ತು. ಆರಂಭಿಕ ಪ್ರತಿರೋಧದ ನಂತರ ನಾಯ್ಡು ಅವರನ್ನು ಬಂಧಿಸಿ ಕರೆದೊಯ್ಯಲಾಯಿತು. ಅವರನ್ನು ವಿಜಯವಾಡಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಚಂದ್ರಬಾಬು ನಾಯ್ಡು ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಚಂದ್ರಬಾಬು ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಅಧಿಕ ಬಿಪಿ ಮತ್ತು ಶುಗರ್ ಇರುವುದು ತಿಳಿದುಬಂದಿದೆ. ಚಂದ್ರಬಾಬು ಆರೋಗ್ಯ ಸ್ಥಿತಿ ಸರಿಯಿಲ್ಲ. ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರ ಪರ ವಕೀಲರು ಮತ್ತು ಪಕ್ಷದ ಮುಖಂಡರು ಹೇಳಿದ್ದಾರೆ.