ಚಾಮರಾಜನಗರ: ಜಗತ್ತಿಗೆ ಕೌಶಲ್ಯ ಹಾಗೂ ಸುಂದರ ಜಗತ್ತನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಶ್ವಕರ್ಮರ ಕೊಡುಗೆಗಳ ಬಗ್ಗೆ ಕಾರ್ಯಕ್ರಮ ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಬಿ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭುವನೇಶ್ವರಿ ಹಾಗೂ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಕಲೆ ,ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪದ ಪ್ರತೀಕವಾಗಿರುವ ವಿಶ್ವಕರ್ಮರು ಜಗತ್ತನ್ನು ಸುಂದರಗೊಳಿಸಿ ಮಾನವ ವಿಕಾಸಕ್ಕೆ ಸಮಗ್ರವಾದ ಚಿಂತನೆಗೆ ದೂರ ದೃಷ್ಟಿಯ ವೈಶಾಲ್ಯತೆಗೆ ಕಾರಣೀಭೂತರಾದರು. ಕನ್ನಡ ನಾಡಿನ ಶ್ರೀಮಂತ ವಾಸ್ತುಶಿಲ್ಪ ಕೇಂದ್ರಗಳು ಜಗತ್ತಿಗೆ ಮಾದರಿಯಾಗಿದೆ. ಸರ್ಕಾರ ವಿಶ್ವಕರ್ಮ ಜಯಂತಿ ಹಾಗೂ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸುವ ಮೂಲಕ ವಿಶ್ವಕರ್ಮ ಕೌಶಲ್ಯ ಹಾಗೂ ಅಭಿವೃದ್ಧಿಗೆ ವಿಶೇಷವಾದ ಪ್ರೋತ್ಸಾಹ ನೀಡಿದಿರುವುದು ಮೆಚ್ಚುಗೆಯ ಸಂಗತಿ ಎಂದರು.

ವಿಶ್ವಕರ್ಮದ ಕೊಡುಗೆಗಳ ಕುರಿತು ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಅವರು ವಿಶ್ವಕರ್ಮರ ನಾಲ್ಕು ದಿವ್ಯ ಸಂದೇಶಗಳೇ ಜಗತ್ತಿನಲ್ಲಿ ನಿರ್ಮಾಣಕ್ಕೆ ಕಾರಣಿಭೂತವಾಗಿದೆ. ಆಂತರಿಕ ಮತ್ತು ಬಾಹ್ಯ ಸಂತೋಷಕ್ಕೆ ಕಾರಣವಾಗಿರುವುದು ವಿಶ್ವಕರ್ಮರು ಜಗತ್ತು ಸುಂದರವಾಗುವುದರ ಜೊತೆಗೆ ಪ್ರಕೃತಿಯ ಶ್ರೇಷ್ಠತೆಯನ್ನು ಬೆಳೆಸಿಕೊಳ್ಳುವ ಕುಶಲತೆಯನ್ನು ಬೆಳೆಸಿದವರು. ಮಾನವನ ಮನಸ್ಸಿನಿಂದ ನಿರ್ಮಾಣವಾಗುವ ಚೈತನ್ಯ ಶಿಲ್ಪಕಲೆ ,ವಾಸ್ತು ಶಿಲ್ಪ ಪ್ರಜ್ಞೆಯು ಮನಸ್ಸಿನ ಭವ್ಯತೆಯನ್ನು ನಿರ್ಧರಿಸುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಗವಂತನ ಸ್ವರೂಪವಾಗಿರುವ ವಿಶ್ವಕರ್ಮರು ಮಾನವನ ವಿಕಾಸಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ ವಿಶ್ವದ ಪ್ರಖ್ಯಾತ ರಾಷ್ಟ್ರವಾಗಲೂ ಇಲ್ಲಿಯ ಸಾಂಸ್ಕೃತಿಕ, ಆಧ್ಯಾತ್ಮಿಕ, ಕಲೆ ,ಸಾಹಿತ್ಯ ,ವಾಸ್ತುಶಿಲ್ಪವೇ ಕಾರಣವಾಗಿದೆ. ಯಾರು ಊಹಿಸಲು ಸಾಧ್ಯವಿಲ್ಲದ ಅಪಾರ ಶಕ್ತಿಯುತವಾದ ಕಲೆಯ ಜೀವನದ ಮಹಾ ಸತ್ಯಗಳನ್ನು ಇಡೀ ದೇಶದ ಎಲ್ಲ ದೇವಾಲಯಗಳಲ್ಲಿ ಮಂದಿರಗಳಲ್ಲಿ ಕಾಣಬಹುದು. ಸರ್ಕಾರಗಳು ಕಲಾ ಕೌಶಲ್ಯದ ವಿಕಾಸಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಕಾರ್ಯಕ್ರಮಗಳನ್ನು ರೂಪಿಸಿ ಮಾನವನ ಕಲಾಪ್ರಜ್ಞೆಯನ್ನು ಪ್ರೋತ್ಸಾಹಿಸುತ್ತಿದೆ ಎಂದರು.

ವೇದಿಕೆಯಲ್ಲಿ ಕಾಡಹಳ್ಳಿ ಕುಮಾರ್, ಶ್ರೀ ವಿಶ್ವಕರ್ಮ ಪ್ರಗತಿ ಮಹಿಳಾ ಸಂಘದ ವನಜಾಕ್ಷಿ, ಶಶಿರೇಖಾ ಶಿವಲಿಂಗ ಮೂರ್ತಿ,ಬಿಕೆ ಆರಾಧ್ಯ , ಶ್ರೀನಿವಾಸ್ ಗೌಡ, ಪಣ್ಯದಹುಂಡಿ ರಾಜು, ಪದ್ಮ ಪುರುಷೋತ್ತಮ್, ಲಕ್ಷ್ಮಿ ನರಸಿಂಹ, ಮುಂತಾದವರು ಉಪಸ್ಥಿತರಿದ್ದರು.