ಹೆಗ್ಗಡದೇವನಕೋಟೆ : ಹೊಗೆ ಸೊಪ್ಪನ್ನು ಬ್ಯಾರನ್ನಲ್ಲಿ ಬೇಯಿಸುವ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊಗೆ ಸೊಪ್ಪು ಸಂಪೂರ್ಣವಾಗಿ ನಾಶವಾಗಿರುವ ಘಟನೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಜರುಗಿದೆ. ಗ್ರಾಮದ ಎಸ್. ರಮೇಶ್ ಎಂಬ ರೈತ ತಮ್ಮ ಜಮೀನಿನಲ್ಲಿ ಬೆಳೆಯಲಾಗಿದ್ದ ತಂಬಾಕನ್ನು ಬೇಯಿಸಲು ಹದ ಮಾಡಿಟ್ಟ ೪೦೦ ಕಡ್ಡಿಗಳ ಸುಮಾರು ಎರಡು ಲಕ್ಷ ರೂ, ಮೌಲ್ಯದ ತಂಬಾಕನ್ನು ಬೇಯಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲಿಗೆಗಳು ತಂಬಾಕಿನ ಬ್ಯಾರೆನ್ ಸುತ್ತ ವ್ಯಾಪಿಸಿ ನಿಯಂತ್ರಣಕ್ಕೆ ಬಾರದ ಸ್ಥಿತಿಯಲ್ಲಿ ಸಂಪೂರ್ಣ ನಾಶಗೊಂಡಿತು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರ ಮಾಹಿತಿ ಆಧರಿಸಿ ಅಗ್ನಿಶಾಮಕ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿ ಹತೋಟಿಗೆ ತಂದರು. ಅಗ್ನಿಶಾಮಕ ದಳದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಸೋಮಣ್ಣ, ಪ್ರಮುಖ ಅಗ್ನಿಶಾಮಕ ಅಧಿಕಾರಿ ನಾಯಕ್, ಅಶೋಕ್ ಕೆ. ಚಾಲಕರುಗಳಾದ ಹೇಮಂತ್ ಕುಮಾರ್, ಸುನಿಲ್ ಕುಮಾರ್, ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಬಾಲಕೃಷ್ಣ, ಎಲ್ಲಪ್ಪ, ಉದಯ್ ಬೆಂಕಿ ನಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.