ಮೈಸೂರು: ಸಂಸತ್ ಭವನದೊಳಗೆ ಸ್ಮೋಕ್ ಬಾಂಬ್ ವಿಚಾರ ಕುರಿತು 11 ದಿನಗಳ ನಂತರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಘಟನೆ ನಂತರ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಇಂದು ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ. ಆ ವಿಚಾರದಲ್ಲಿ ಏನೂ ಯಾವ ವಿವರಣೆ ಕೊಡುವುದಿಲ್ಲ.
ಪ್ರತಾಪ್ ಸಿಂಹ ದೇಶ ದ್ರೋಹಿನಾ, ದೇಶಪ್ರೇಮಿನಾ ಅಂತಾ ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ ಹಾಗೂ ಮೈಸೂರು- ಕೊಡಗು ಜನ ತೀರ್ಪು ನೀಡುತ್ತಾರೆಂದು ಅವರು ಹೇಳಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ದೇಶ ಪ್ರೇಮಿನಾ ದೇಶ ದ್ರೋಹಿನಾ ಅಂತಾ ಜನ ತೀರ್ಮಾನ ಮಾಡುತ್ತಾರೆಂದರು. ನಂತರ ಪ್ರತಾಪ್ ಸಿಂಹ ಮೈಸೂರು – ಬೆಂಗಳೂರು ಹೈವೆ ವಿಚಾರದ ಬಗ್ಗೆ ಮಾತನಾಡಿ, ಮೈಸೂರು ಸಂಸದ ಬುರುಡೆ ಬಿಡುತ್ತಾರೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು.
ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು ಎಂದು ಅವರು ಹೇಳಿ, ರಸ್ತೆಯಲ್ಲಿ ನೀರು ತುಂಬಿದ್ದಾಗ, ಅಂಡರ್ ಪಾಸ್ ನಲ್ಲಿ ನೀರು ತುಂಬಿದಾಗ ಬೈಯ್ದಿದ್ದು ಯಾರನ್ನಾ? ಆ ಸಮಸ್ಯೆ ಪರಿಹರಿಸಿದ್ದು ಯಾರು? ಎಂದು ಪ್ರಶ್ನಿಸಿದರು.
ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈಯ್ದಿದ್ದು ಯಾರನ್ನ? ಆ ಸಮಸ್ಯೆ ಬಗೆಹರಿಸಿದ್ದು ಯಾರು? ಬೈಯ್ದಿದ್ದು ಪ್ರತಾಪ್ ಸಿಂಹನನ್ನೆ. ಸಮಸ್ಯೆ ಪರಿಹರಿಸಿದ್ದು ಪ್ರತಾಪ್ ಸಿಂಹನೇ ಎಂದು ಅವರು ಮಾರ್ಮಿಕವಾಗಿ ನುಡಿದರು.
ಸಮಸ್ಯೆ ಆದಾಗ ಸಿದ್ದರಾಮಯ್ಯ, ಮಹಾದೇವಪ್ಪ ಆಗ ಎಲ್ಲಿ ಹೋಗಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.
8,500 ಸಾವಿರ ಕೋಟಿ ರು ನಾ ಪ್ರಾಜೆಕ್ಟ ಇದು. ಈ ಪ್ರಾಜೆಕ್ಟ್ ಗೆ ಸಿದ್ದರಾಮಯ್ಯ ಅವರ ಸರಕಾರದಲ್ಲಿ 8 ರೂಪಾಯಿ ಕೊಟ್ಟಿದ್ದರೆ ಸಿದ್ದರಾಮಯ್ಯ – ಮಹಾದೇವಪ್ಪ ಜೋಡಿ ರಸ್ತೆ ಅಂತಾ ಬೇಕಾದರೆ ಇಟ್ಟು ಬಿಡೋಣವೆಂದು ವ್ಯಂಗ್ಯವಾಡಿದರು.
ಇದು ನನ್ನ ರಸ್ತೆಯಲ್ಲ. ಮೋದಿ ಅವರ ರಸ್ತೆ. ನಾನು ಒಬ್ಬ ಮೇಸ್ತ್ರಿ, ಮೋದಿ ಅವರ ಹೈವೆ ಇದು. ನಾನು ಮೋದಿ ಹೇಳಿದ ಕೆಲಸ ಮಾಡುವ ಮೇಸ್ತ್ರಿ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಸಿಎಂ ಆದವರು ಪದ ಪ್ರಯೋಗ ಮಾಡುವಾಗ ಎಚ್ಚರವಹಿಸಬೇಕು. ಎಲ್ಲರನ್ನು ತಾತ್ಸರದಿಂದ ಮಾತಾಡುವುದು ನಿಲ್ಲಿಸಲಿ ಎಂದು ಅವರು ಹೇಳಿದರು.
ಸಾಯೋವರೆಗೂ ನಾನು ಪಾಲಿಟಿಕ್ಸ್ ಮಾಡಲು ಬಂದಿಲ್ಲ. ಸಾಯೋವರೆಗೂ ಪಾಲಿಟಿಕ್ಸ್ ಮಾಡುವವರಿಗೆ ಹೇಳಿ ಕೊಳ್ಳಲು ಏನೂ ಇಲ್ಲದೆ ಇದ್ದಾಗ ಈ ರೀತಿ ಕ್ರೆಡಿಟ್ ಪಾಲಿಟಿಕ್ಸ್ ಶುರುವಾಗುತ್ತದೆಂದರು ಪ್ರತಾಪ್ ಸಿಂಹ.
ಇನ್ನು ಹಿಜಾಬ್ ವಿಚಾರದ ಬಗ್ಗೆ ಮಾತನಾಡಿದ ಸಂಸದರು, ಇದು ಹಿಂದೂ – ಮುಸ್ಲಿಂ ವಿಚಾರ ಅಲ್ಲ. ಸಮವಸ್ತ್ರ ಸಂಹಿತೆ ಅಂತಾ ಇರುತ್ತದೆ. ಅದು ಪಾಲನೆ ಆಗಬೇಕು ಅಷ್ಟೆ. ಇದನ್ನು ಸಿಎಂ ಗಮನಿಸಲಿ ಎಂದು ತಿಳಿಸಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವ ಕುರಿತು ನಡೆಯುತ್ತಿರುವ ಚರ್ಚೆ ವಿಚಾರ ಪ್ರಸ್ತಾಪಿಸಿದ ಪ್ರತಾಪ್ ಸಿಂಹ, ಮಹಾರಾಜರು ತಮ್ಮ ಮನೆಯ ದುಡ್ಡು ತಂದು ಮೈಸೂರು ಅಭಿವೃದ್ಧಿ ಮಾಡಿಲ್ಲ ಅಂತಾ ಸಿದ್ದರಾಮಯ್ಯ ಹಿಂದೆ ಹೇಳಿದ್ದರು. ಆ ಹೇಳಿಕೆ ಬಂದಾಗಲೇ ನಮಗೆ ಗೊತ್ತಾಯಿತು. ಸಿದ್ದರಾಮಯ್ಯ ಪ್ರೀತಿ, ಅಭಿಮಾನ ಗೌರವ ಟಿಪ್ಪು ಗೆ ಹೊರತು ಮೈಸೂರು ಮಹಾರಾಜರಿಗೆ ಅಲ್ಲ ಅಂತಾ.
ಸಿದ್ದರಾಮಯ್ಯ ಅವರ ನಿಷ್ಠೆ ಟಿಪ್ಪು ಗೆ ಹೊರತು ಮಹಾರಾಜರಿಗೆ ಅಲ್ಲ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರು ಬಂದಾಗ ಈ ರೀತಿ ಆಗುತ್ತದೆ ಅಂತನೇ ಮೈಸೂರು ಮಹಾರಾಜರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲು ನಮ್ಮ ಸರಕಾರ ತೀರ್ಮಾನಿಸಿ ಕ್ಯಾಬಿನೆಟ್ ಒಪ್ಪಿಗೆ ಪಡೆದಿದ್ದೆವು ಎಂದರು.
ಸಿದ್ದರಾಮಯ್ಯ ಐಷಾರಾಮಿ ಜೆಟ್ ನಲ್ಲಿ ಬಂದಿದ್ದನ್ನು ಟೀಕಿಸಿದ ಸಂಸದ ಪ್ರತಾಪ್ ಸಿಂಹ, ತಮ್ಮ ನಡೆ ಸಮರ್ಥಿಸಿ ಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆಂದರು.
ಪ್ರಧಾನಿ ಏರ್ ಫೋರ್ಸ್ ಓನ್ ನಲ್ಲಿ ಅದು ಸರಕಾರದ ವಿಮಾನದಲ್ಲೆ ಓಡಾಡುತ್ತಾರೆ. ಖಾಸಗಿ ಜೆಟ್ ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ದೇಶಕ್ಕೆ ಇರೋದು ಒಬ್ಬರೆ ಪ್ರಧಾನಿ. ದೇಶದಲ್ಲಿ 29 ಜನ ಸಿಎಂ ಇದ್ದಾರೆ. ನೀವು ಸುಖಾ ಸುಮ್ಮನೆ ಪ್ರಧಾನಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿ ಕೊಳ್ಳ ಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದನ್ನು ಮೊದಲು ಬಿಡಿ ಎಂದು ಅವರು ತಿಳಿಸಿದರು.