ಗುಂಡ್ಲುಪೇಟೆ: ಹಾವುಗಳು ರೈತನ ಮಿತ್ರನಾಗಿದ್ದು, ಇಲಿಗಳನ್ನು ತಿಂದು ಆಹಾರ ಪದಾರ್ಥ ರಕ್ಷಿಸುತ್ತವೆ. ಜೊತೆಗೆ ಪರಿಸರದಲ್ಲಿ ಅತಿ ಮುಖ್ಯ ಜೀವಿಯಾಗಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ತಿಳಿಸಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಶ್ವ ಹಾವಿನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಸುಮಾರು 3600 ಹಾವುಗಳಿದ್ದು, ಭಾರತದಲ್ಲಿ ಸುಮಾರು 278 ವಿಧದ ಹಾವುಗಳಿವೆ. ಅವುಗಳಲ್ಲಿ ಕೇವಲ 6 ಮಾತ್ರ ವಿಷಯುಕ್ತವಾಗಿದ್ದು, ಮಿಕ್ಕವು ನಿರಪಾಯಕಾರಿ ಎಂದು ಮಾಹಿತಿ ನೀಡಿದರು.
ನಾಗರಹಾವು, ಕಾಳಿಂಗ, ಮಂಡಲದ ಹಾವು, ಕಟ್ಟು ಹಾವು, ಸಮುದ್ರದ ಹಾವು ಹಾಗೂ ಮಲಬಾರ್ ಪಿಟ್ ವೈಪರ್ ವಿಷಯುಕ್ತವಾಗಿದ್ದು, ಹೆಚ್ಚಿನ ಹಾವು ವಿಷವಿಲ್ಲದ್ದು. ನಾಗರ ಹಾವು, ಕಾಳಿಂಗ, ಮಂಡಲದ ಹಾವು, ಕಟ್ಟು ಹಾವುಗಳಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ ಎಂದು ಕಳವಲ ವ್ಯಕ್ತಪಡಿಸಿದರು.
ವಿಜ್ಞಾನ ಶಿಕ್ಷಕ ಮಂಜು ಮಾತನಾಡಿ, ಹಾವಿನ ಕಡಿತಕ್ಕೆ ಔಷಧವನ್ನು ಕೆಲವು ಕಡೆ ಹಾವಿನ ವಿಷದಿಂದಲೇ ತಯಾರಿಸುತ್ತಾರೆ. ಹಾವುಗಳಿಗೆ ಮನುಷ್ಯರು ಯಾವುದೇ ರೀತಿಯ ತೊಂದರೆ ನೀಡದಿದ್ದರೆ ಅವುಗಳ ಸಹ ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಮನೆ ಸೇರಿದಂತೆ ಇನ್ನಿತ ಕಡೆ ಹಾವುಗಳನ್ನು ಕಂಡರೇ ಅವುಗಳನ್ನು ಕೊಲ್ಲದೆ ಉಗರ ತಜ್ಞರಿಂದ ಹಾವು ಹಿಡಿಸಿ ಕಾಡಿಗೆ ಬಿಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ತಾವೇ ಸೆರೆ ಹಿಡಿದ ಹಾವುಗಳ ಛಾಯಾಚಿತ್ರ ಪ್ರದರ್ಶಿಸಿ ಮಕ್ಕಳಿಗೆ ಹಾವನ್ನು ಹೇಗೆ ತಿಳಿಯುವುದು, ಅವುಗಳ ಗುಣ ಲಕ್ಷಣಗಳನ್ನು ವಿವರಿಸಿ, ತಾವೇ ಬರೆದ ಹಾವುಗಳ ಬಗೆಗಿನ ಕಿರು ಪುಸ್ತಕವನ್ನು ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಂಜುನಾಥ್, ನಂಜುಂಡಸ್ವಾಮಿ ಸೇರಿದಂತೆ ಸಿಬ್ಬಂದಿಗಳು, ಮಕ್ಕಳು ಹಾಜರಿದ್ದರು.