ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ದೂರು ಸಲ್ಲಿಸಿದ್ದಾರೆ.
ದಟ್ಟಗಳ್ಳಿ ಬಡಾವಣೆಯಲ್ಲಿ ಅಕ್ರಮ ನಿವೇಶನ ಪಡೆದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ದಾಖಲೆಗಳ ಸಮೇತ ಲೋಕಾಯುಕ್ತ ಅಧಿಕಾರಿಗೆ ಅವರು ದೂರು ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಟ್ಟಗಳ್ಳಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ೨೪ ಲಕ್ಷಕ್ಕೆ ಒಂದು ಸೈಟು ಖರೀದಿ ಮಾಡಿ ೧ ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸತ್ಯನಾರಾಯಣ ಎಂಬುವರಿಂದ ೨೦೦೮ರಲ್ಲಿ ೫೦*೮೦ ವಿಸ್ತೀರ್ಣ ನಿವೇಶನ ಖರೀದಿಸಿದ್ದು, ೨೦೧೪ರಲ್ಲಿ ಮಾರಾಟ ಮಾಡಿದ್ದಾರೆ. ೬ ವರ್ಷಗಳಲ್ಲಿ ೭೫ ಲಕ್ಷ ಲಾಭ ಮಾಡಿಕೊಂಡಿದ್ದಾರೆ ಎಂದರು. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಸಿಎಂ ಪತ್ನಿ ಪಾರ್ವತಿ ಅವರು ನೋಂದಣಿ ಅಧಿಕಾರಿಗಳನ್ನು ತಾವಿದ್ದ ಕಡೆಗೆ ಕರೆಸಿಕೊಂಡು ಮಾರಾಟ ಮಾಡಿದ್ದಾರೆ. ಆದ್ದರಿಂದ ಅವರು ಎಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ ಎಂದರು.
ಇದೇ ರೀತಿ ಮುಡಾದ ಮಾಜಿ ಆಯುಕ್ತ ನಟೇಶ್ ಅವರು ಸೈಯದ್ ಅಲಿ ಅವರಿಗೆ ಕಾನೂನು ಬಾಹಿರವಾಗಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಯದ್ ಅಲಿ, ನಟೇಶ್ ಹೆಂಡತಿಯ ಸೋದರ ಮಾವ ರಾಜಶೇಖರ್ ಅವರ ಪತ್ನಿ ತಾರಾ ಅವರಿಗೆ ಒಂದು ಸೈಟ್ ಮಂಜೂರು ಮಾಡಿದ್ದಾರೆ. ಈ ಎಲ್ಲವನ್ನೂ ತನಿಖೆ ಮಾಡುವಂತೆ ಲೋಕಾಯುಕ್ತಕ್ಕೆ ದಾಖಲೆಗಳೊಂದಿಗೆ ದೂರು ಸಲ್ಲಿಸಿದ್ದೇನೆ.
ಮುಡಾ ೫೦:೫೦ ಹಗರಣ ವಿಚಾರವಾಗಿ ಲೋಕಾಯುಕ್ತದಲ್ಲಿ ನಾನು ಪ್ರಕರಣ ದಾಖಲಿಸಿದ್ದೇನೆ. ಎಲ್ಲ ೫೦:೫೦ ಅನುಪಾತದ ನಿವೇಶನಗಳ ಬಗ್ಗೆ ತನಿಖೆ ಮಾಡುವಂತೆ ಮನವಿ ಪತ್ರ ಕೊಟ್ಟಿದ್ದೆನೆ. ಆದರೆ ಲೋಕಾಯುಕ್ತ ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಕುಟಂಬದ ೧೪ ನಿವೇಶನಗಳ ಬಗ್ಗೆ ಮಾತ್ರ ತನಿಖೆ ಮಾಡಿದ್ದಾರೆ. ಇತರ ಆರೋಪಿಗಳು ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ ಎಂದರು.