ಮೈಸೂರು : ಮುಡಾ ಮಾಜಿ ಆಯುಕ್ತ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಡಿಬಿ ನಟೇಶ್ ಅವರ ಫೋಟೋ ಮತ್ತು ಆಡಿಯೋ ತುಣುಕು ಎಡಿಟ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಸಿಸಿಬಿ ಪೊಲೀಸರ ತಂಡವು ಸ್ನೇಹಮಯಿ ಕೃಷ್ಣ ಅವರಿಗೆ ಸಂಬಂಧಿಸಿದ ಎರಡು ಮನೆ ಹಾಗೂ ಒಂದು ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತಪಾಸಣೆ ನಡೆಸಿದ್ದು, ಶುಕ್ರವಾರ ಮಧ್ಯಾಹ್ನ 2:30ಕ್ಕೆ ಆರಂಭವಾದ ಈ ತಲಾಶೆ ಸಂಜೆ 6:30ರ ವರೆಗೆ ಸತತ ನಾಲ್ಕು ಗಂಟೆಗಳ ಕಾಲ ಮುಂದುವರಿಯಿತು. ಅಧಿಕಾರಿಗಳು ಪ್ರತಿಯೊಂದು ಮೂಲೆಯನ್ನು ಜಾಲಾಡಿದ್ದು, ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಸ್ನೇಹಮಯಿ ಕೃಷ್ಣ ಸಿಸಿಬಿ ಪೊಲೀಸರ ವಶದಲ್ಲಿದ್ದು, ತನಿಖೆ ತೀವ್ರಗೊಂಡಿದೆ.
ಇನ್ನೂ ಸ್ನೇಹಮಯಿ ಕೃಷ್ಣ ಅವರ ಮನೆಯಲ್ಲಿ ಸಿಕ್ಕ ವಸ್ತುಗಳೂ ಯಾವುದು ಎಂಬುದನ್ನು ನೋಡುವುದಾದರೇ,
- 16 GB ಸಾಮರ್ಥ್ಯದ ಕೆಂಪು ಬಣ್ಣದ ಪೆನ್‌ಡ್ರೈವ್.
- ನೇರಳೆ ಬಣ್ಣದ ರೆಡ್‌ಮಿ ಫೋನ್ (ಸ್ವಿಚ್ ಆಫ್ ಸ್ಥಿತಿಯಲ್ಲಿತ್ತು).
- ಸಿಲ್ವರ್ ಬಣ್ಣದ ಐಫೋನ್ (ಸ್ಕ್ರೀನ್ ಒಡೆದು ಹೋಗಿತ್ತು).
- ಲೆನೆವೋ ಕಂಪನಿಯ ಐಪ್ಯಾಡ್.
- ಒಂದು ಮೈಕ್ರೋ ಎಸ್‌ಡಿ ಕಾರ್ಡ್.
- ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ 20 ಪುಟಗಳ ದಾಖಲೆಗಳು.
- 1 TB ಸಾಮರ್ಥ್ಯದ ಹಾರ್ಡ್ ಡಿಸ್ಕ್.
ದಾಳಿಯ ವೇಳೆ ಸಿಕ್ಕ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ದಾಖಲೆಗಳನ್ನು ಸಿಸಿಬಿ ಪೊಲೀಸರು ಸ್ಥಳದಲ್ಲೇ ಸೀಲ್ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ನಕಲಿ ಆಡಿಯೋ ತುಣುಕು ಸೃಷ್ಟಿಸಿದವರ ಹಿಂದೆ ಯಾರಿದ್ದಾರೆ ಮತ್ತು ಇದರ ಉದ್ದೇಶವೇನಿತ್ತು ಎಂಬುದು ಸಿಸಿಬಿ ವಿಚಾರಣೆಯಿಂದ ಹೊರಬರಬೇಕಿದೆ.
ಸದ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿರುವ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಅಧಿಕಾರಿಗಳು ತಡರಾತ್ರಿಯವರೆಗೂ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವೈರಲ್ ಆಗಿರುವ ಆಡಿಯೋ ತುಣುಕಿನ ಕುರಿತು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಕೃಷ್ಣ, ‘ಆಡಿಯೋದಲ್ಲಿ ಮಾತನಾಡಿರುವುದು ಮುಡಾ ಮಾಜಿ ಆಯುಕ್ತ ನಟೇಶ್ ಅವರೇ’ ಎಂದು ವಾದಿಸುತ್ತಿದ್ದು, ತಮ್ಮ ಆರೋಪಕ್ಕೆ ಬದ್ಧರಾಗಿರುವುದಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಸಂದರ್ಭದಲ್ಲಿ ವೈರಲ್ ಆಗಿರುವ ಆಡಿಯೋದ ಅಸಲಿಯತ್ತನ್ನು ಭೇದಿಸಲು ಸಿಸಿಬಿ ಪೊಲೀಸರು ಈಗ ವೈಜ್ಞಾನಿಕ ಹಾದಿ ಹಿಡಿದಿದ್ದು, ಆಡಿಯೋ ತುಣುಕನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಇದರೊಂದಿಗೆ ಹಿರಿಯ ಕೆಎಎಸ್ ಅಧಿಕಾರಿ ಡಿಬಿ ನಟೇಶ್ ಅವರ ಧ್ವನಿಯ ಮಾದರಿಯನ್ನು (Voice Sample) ಪೊಲೀಸರು ಪಡೆಯಲಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ನಂತರವೇ ಆ ಧ್ವನಿ ನಟೇಶ್ ಅವರದ್ದೇ ಅಥವಾ ನಕಲಿಯೇ ಎಂಬುದು ಅಧಿಕೃತವಾಗಿ ಸಾಬೀತಾಗಲಿದೆ ಎನ್ನಲಾಗಿದೆ.



