ದಾವಣೆಗೆರೆ: ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾಸುರಕ್ಷಾ, ವೃದ್ದಾಪ್ಯ, ವಿಧವಾ, ಅಂಗವಿಕಲರ ಮಾಸಾಶನ ಸೇರಿದಂತೆ ಇನ್ನಿತರೆ ಮಾಸಾಶನಗಳನ್ನು ಅಂಚೆ ಇಲಾಖೆಯಿಂದ ನಿಗದಿತ ಸಮಯಕ್ಕೆ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆ ಅನುಷ್ಟಾನಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಯೋಜನೆ ಮಾಸಾಶನ ಸಕಾಲದಲ್ಲಿ ತಲುಪದ ಕಾರಣ ವಯೋವೃದ್ದರಿಗೆ ಜೀವನ ನಿರ್ವಹಣೆ ಹಾಗೂ ದಿನನಿತ್ಯದ ಖರ್ಚುವೆಚ್ಚಗಳಿಗೆ ಸಮಸ್ಯೆಯಾಗಿದೆ ಎಂದು ಹಲವು ಮಾಸಾಶನ ಫಲಾನುಭವಿಗಳು ದೂರು ನೀಡಿದ್ದರು.
ಮಾಸಾಶನ ಪಾವತಿಯ ಹಂತಗಳು; ಅಂಚೆ ಮೂಲಕ ಪಡೆಯುತ್ತಿರುವ ಸಾಮಾಜಿಕ ಭದ್ರತಾ ಮಾಸಾಶನವು ಆಧಾರ್ ಬೇಸ್ಡ್ ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಇರುತ್ತದೆ. ಅಂಚೆ ಎಸ್.ಬಿ.ಖಾತೆಯಿಂದ ಮಾಸಾಶನ ಪಾವತಿಗೆ ಅವರ ಮನೆ ಬಾಗಿಲಲ್ಲಿ ಪಾವತಿಸಲು ಹಿಂಪಡೆಯುವ ನಮೂನೆಗೆ ಸಹಿ ಮತ್ತು ಇದಕ್ಕೆ ಗೆಜಿಟೆಡ್ ಅಧಿಕಾರಿಗಳ ಸಹಿ, ಸಾಕ್ಷಿಗಳ ಸಹಿ ಪಡೆದು ಮನೆ ಬಾಗಿಲಲ್ಲಿ ವಿತರಣೆ ಮಾಡಲಾಗುತ್ತದೆ. ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ವ್ಯವಸ್ಥೆಯಡಿ ಅಂಚೆ ಕಚೇರಿಯಲ್ಲಿ ಹಾಗೂ ಮನೆ ಬಾಗಿಲಲ್ಲಿ ಬಯೋಮೆಟ್ರಿಕ್ ಮೂಲಕ ಅಂಚೆಯಣ್ಣ ಪಾವತಿಸುವರು. ಮಾಸಾಶನ ಸರ್ಕಾರದಿಂದ ಅವರ ಖಾತೆಗೆ ಜಮೆಯಾದ ಬಗ್ಗೆ ಅವರು ನೀಡಿರುವ ಮೊಬೈಲ್‍ಗೆ ಮೆಸೇಜ್ ಹೋಗುತ್ತದೆ. ಫಲಾನುಭವಿಗಳು ಬಯೋಮೆಟ್ರಿಕ್ ನೀಡುವಾಗ ಮತ್ತು ವಿತ್‍ಡ್ರಾ ನಮೂನೆಗೆ ಸಹಿ ಮಾಡುವಾಗ ಖಾತರಿ ಮಾಡಿಕೊಳ್ಳಬೇಕಾಗುತ್ತದೆ.
ಸಭೆಯಲ್ಲಿ ಅಂಚೆ ಅಧೀಕ್ಷಕರಾದ ಚಂದ್ರಶೇಖರ್, ಸಾಮಾಜಿಕ ಭದ್ರತಾ ಯೋಜನೆ ಸಹಾಯಕ ನಿರ್ದೇಶಕರಾದ ಪುಷ್ಪಾ ಹಾಗೂ ಅಂಚೆ ಇಲಾಖೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.