ರಾಯಚೂರು: ಹಣ ನೀಡದ ತಂದೆಯನ್ನು ಮಗನೇ ಹತ್ಯೆ ಮಾಡಿ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ವಡ್ಲೂರು ಗ್ರಾಮದ ಶಿವನಪ್ಪ (65) ಮೃತ ವ್ಯಕ್ತಿ. ಈರಣ್ಣ (35) ಕೊಲೆಗೈದ ವ್ಯಕ್ತಿ.
ಹೆದ್ದಾರಿ ನಿರ್ಮಾಣಕ್ಕೆ ಶಿವನಪ್ಪ ಅವರ ಜಮೀನನ್ನು ಸರ್ಕಾರ ಪಡೆದಿತ್ತು. ಇದರಿಂದ ಪರಿಹಾರದ ಹಣ ಬಂದಿತ್ತು. ಇದನ್ನು ಕಂಡ ಮಗ ತಂದೆಯಲ್ಲಿ ಹಣ ಕೊಡುವಂತೆ ಕೇಳಿದ್ದಾನೆ, ಇದಕ್ಕೆ ತಂದೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಮಗ ಕಳೆದ ಜುಲೈ 7ನೇ ತಾರೀಖಿನಂದು ತಂದೆಯನ್ನು ಕೊಲೆಗೈದಿದ್ದಾನೆ ಬಳಿಕ ತಂದೆಯ ದೇಹವನ್ನು ನಿರ್ಮಾಣ ಹಂತದಲ್ಲಿರುವ ಹೆದ್ದಾರಿ ಬಳಿ ಹೂತಿಟ್ಟಿದ್ದಾನೆ. ವಿಚಾರ ಯಾರಿಗೂ ಅನುಮಾನ ಬಾರದಂತೆ ತಂದೆ ಕಾಣೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿಸಿ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದಾನೆ.
ಮೃತ ಶಿವನಪ್ಪನ ಸಹೋದರರಿಗೆ ಅನುಮಾನ ಬಂದು ಈರಣ್ಣನನ್ನು ವಿಚಾರಿಸಿದಾಗ, ತಾನು ಕೊಲೆಗೈದು ಮೃತದೇಹವನ್ನು ಹೆದ್ದಾರಿ ಬದಿ ಹೂತಿಟ್ಟ ವಿಚಾರ ಬಾಯಿ ಬಿಟ್ಟಿದ್ದಾನೆ. ಬಳಿಕ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.