ಚಾಮರಾಜನಗರ: ರೈತ ಗೀತೆ ಮತ್ತು ಯುಗಾದಿ ಸಾಹಿತ್ಯದ ಕುರಿತು ಗೀತ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಯುಗಾದಿ ಸಂಭ್ರಮ ಗೀತ ಗಾಯನ ಕಾರ್ಯಕ್ರಮ ವನ್ನು ನಿವೃತ್ತ ಡಿಎಡ್ ಕಾಲೇಜಿನ ಪ್ರಶಿಕ್ಷಕರಾದ ಸುದರ್ಶನ್ ಉದ್ಘಾಟನೆ ನೆರವೇರಿಸಿದರು. ಯುಗಾದಿ ಹಬ್ಬವು ಭಾರತೀಯರ ವಿಶೇಷ ಹಬ್ಬವಾಗಿದೆ ಹೊಸ ಸಂವತ್ಸರದ ಕಾಲಘಟ್ಟದಲ್ಲಿ ಸರ್ವರಿಗೂ ಒಳಿತನ್ನು ಬಯಸಿ ಸಂತೋಷವನ್ನು ತರುವ ಕಾರ್ಯ ಮಾಡುವುದೇ ಹಬ್ಬಗಳ ಮಹತ್ವವಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು ಇದ್ದಹಾಗೆ. ಸಂಸ್ಕೃತಿಯ ಮೂಲಕ ಉತ್ತಮ ಸಾಹಿತ್ಯ ಕಟ್ಟಿ ಮಾನವ ಜೀವನವನ್ನು ಸುಂದರಗೊಳಿಸಿ ಕೊಳ್ಳೋಣ ಎಂದರು.
ನಾಡಿನ ಗಾಯಕ ರಾಮಸಮುದ್ರದ ಜನಪದ ಮಹೇಶ್ ರೈತ ಗೀತೆ ಮತ್ತು ಯುಗಾದಿ ಗೀತೆಗಳನ್ನು ಹಾಡುವ ಮೂಲಕ ಸಭೆಗೆ ಮತ್ತಷ್ಟು ಮೆರಗನ್ನು ನೀಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಡಿ ಲೋಕೇಶ್ ಮಾತನಾಡಿ ಯುಗಾದಿ ಹಬ್ಬವು ಹಿಂದುಗಳ ವಿಶೇಷ ಹಬ್ಬವಾಗಿದೆ. ಸರ್ವರಲ್ಲೂ ಸಹಿಷ್ಣುತೆ, ಗೌರವ, ಪ್ರೀತಿ ,ಸಹೋದರ ಭಾವನೆಯನ್ನು ಜಗತ್ತಿಗೆ ಹೇಳಿಕೊಟ್ಟಿರುವ ಸಂಸ್ಕೃತಿ ನಮ್ಮದಾಗಿದೆ ಎಂದರು. ಯುಗಾದಿ ಹಬ್ಬವು ನಮ್ಮೆಲ್ಲರಲ್ಲೂ ಪ್ರೀತಿ ಸ್ನೇಹದ ಬಾಂಧವ್ಯವನ್ನು ಹೆಚ್ಚಿಸಲಿ ಎಂದು ತಿಳಿಸಿದರು.
ಮಾಜಿ ನಗರ ಸಭಾ ಸದಸ್ಯರಾದ ಪದ್ಮ ಪುರುಷೋತ್ತಮ್ ಮಾತನಾಡಿ ಸಾಹಿತ್ಯ ಪರಿಷತ್ತು ಯುಗಾದಿ ಸಾಹಿತ್ಯ ಗೀತ ಗಾಯನ ಆಚರಿಸುವ ಮೂಲಕ ವಿಶೇಷವಾದ ಕಾರ್ಯಕ್ರಮವನ್ನು ರೂಪಿಸಿದೆ. ಎಲ್ಲರೂ ಸದಾಕಾಲ ಸಂತೋಷ ಪಡೋಣ ಎಂದರು.
ಕನ್ನಡ ಚಳುವಳಿಗಾರರಾದ ಚಾ ರಂ ಶ್ರೀನಿವಾಸ ಗೌಡ ಶುಭ ಹಾರೈಸಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಸಾಹಿತ್ಯಕ್ಕೂ ಯುಗಾದಿಗು ಅಪಾರ ಬಾಂಧವ್ಯವಿದೆ. ಕನ್ನಡದ ಬೇಂದ್ರೆ ಯುಗಾದಿ ಕವಿಯಂದೇ ಪ್ರಸಿದ್ಧಿ. ಬೇಂದ್ರೆಯವರ ಯುಗ ಯುಗಾದಿ ಕಳೆದರು ಗೀತೆ ಯುಗಾದಿ ಸಂಭ್ರಮದ ಜೊತೆಗೆ ಕನ್ನಡ ಸಾಹಿತ್ಯದ ಮೆರಗನ್ನು ಹೆಚ್ಚಿಸಿದ ಶ್ರೇಷ್ಠ ಗೀತೆಯಾಗಿದೆ. ದೇಶದ ಹಾಗೂ ನಾಡಿನ ಬಹುತೇಕ ಎಲ್ಲಾ ಶ್ರೇಷ್ಠ ಸಾಹಿತಿಗಳು ಯುಗಾದಿ ಕುರಿತು ತಮ್ಮ ಭಾವನೆಗಳನ್ನು ಅಕ್ಷರಗಳ ಮೂಲಕ ರೂಪಿಸಿ ಪ್ರಕೃತಿ, ಸಂಸ್ಕೃತಿ, ಪರಂಪರೆ ಜೀವನ, ಬದುಕು, ಜನಪದ, ನಾಡು ನುಡಿ, ,ಇತಿಹಾಸ, ಪ್ರಕೃತಿ ಗಿಡ, ಮರ, ಬೆಟ್ಟ ಗುಡ್ಡಗಳ ಸಮಗ್ರವಾದ ಚಿತ್ರಣವನ್ನು ಜನತೆಗೆ ನೀಡಿದ್ದಾರೆ. ಸಾಹಿತ್ಯವು ಮಾನವನ ಸಮಗ್ರ ಸಂತೋಷಕ್ಕಾಗಿ ರಚಿತವಾಗುತ್ತದೆ. ಸುಖ ದುಃಖಗಳ ಜೀವನವನ್ನು ಸದಾ ಕಾಲ ಸಂಭ್ರಮಿಸಿ ಸಮಾಜಕ್ಕೆ ಅರ್ಪಿಸಿಕೊಳ್ಳುವ ಮಾನಸಿಕ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕರಾದ ಗೀತಾ, ಸರಸ್ವತಿ, ರವಿಚಂದ್ರ ಪ್ರಸಾದ್ ,ಶಿವಲಿಂಗ ಮೂರ್ತಿ, ಸತೀಶ್, ಕಿರಣ್ ಉಪಸ್ಥಿತರಿದ್ದರು.