ಕೋಲ್ಕತ್ತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಕಾರು ಗುರುವಾರ ರಾತ್ರಿ ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯ ದಂತನ್‌ಪುರ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ.
ಬುರ್ದ್ವಾನ್ ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಪ್ರಯಾಣಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೌರವ್ ಗಂಗೂಲಿ ಅವರ ಕಾರು ದುರ್ಗಾಪುರ ಎಕ್ಸ್ ಪ್ರೆಸ್ ವೇ ಮೂಲಕ ಹಾದುಹೋಗುವಾಗ ಸಿಂಗೂರ್ ಬಳಿ, ಇದ್ದಕ್ಕಿದ್ದಂತೆ ವೇಗವಾಗಿ ಬಂದ ಲಾರಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕಿಯಾಗುತ್ತಿದ್ದಂತೆಯೇ ಸೌರವ್ ಗಂಗೂಲಿ ಅವರ ಕಾರಿನ ಚಾಲಕ ಕಾರಿನ ನಿಯಂತ್ರಣ ಪಡೆಯಲು ತಕ್ಷಣ ಬ್ರೇಕ್ ಹಾಕಿದರು. ಪರಿಣಾಮವಾಗಿ ಬೆಂಗಾವಲು ಪಡೆಯ ಎಲ್ಲಾ ವಾಹನಗಳು ಒಂದರ ನಂತರ ಒಂದರಂತೆ ಸೌರವ್ ಗಂಗೂಲಿ ಅವರ ಕಾರಿಗೆ ಡಿಕ್ಕಿ ಹೊಡೆದವು. ಅದೃಷ್ಟವಶಾತ್, ಸೌರವ್ ಯಾವುದೇ ಗಂಭೀರ ಗಾಯಗಳಿಲ್ಲದೆ ಈ ಭೀಕರ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಬೆಂಗಾವಲು ಪಡೆಯಲ್ಲಿದ್ದ ವಾಹನಗಳಿಗೆ ಹಾನಿಯಾಗಿದೆ. ಸ್ವಲ್ಪ ಹೊತ್ತು ರಸ್ತೆಯಲ್ಲಿ ಕಾದ ನಂತರ ಗಂಗೂಲಿ ಬೇರೆ ವಾಹನದಲ್ಲಿ ಸಮಾರಂಭಕ್ಕೆ ತೆರಳಿದ್ದಾರೆ. ದುರ್ಗಾಪುರ ಎಕ್ಸ್‌ಪ್ರೆಸ್‌ವೇಯ ದಾದುಪುರ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.