Thursday, April 3, 2025
Google search engine

Homeರಾಜ್ಯದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

ಕಲಬುರ್ಗಿ: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ. ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಅಂಗಾಂಗ ದಾನ ಯೋಜನೆಗೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿದೆ. ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮಹತ್ವದ ಯೋಜನೆಗೆ ಇಲಾಖೆ ಮುಂದಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು ತನ್ನ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ನವೀಕರಿಸಲು ಮತ್ತು ಅಂಗಾಂಗ ಮರು ಪಡೆಯುವ ಕೇಂದ್ರ ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಸಂಬಂಧ ಆದೇಶ ಕೂಡ ಹೊರಡಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ 125ನೇ ವರ್ಷಾಚರಣೆ ಸಂದರ್ಭದಲ್ಲಿಯೇ ಈ ಮಹತ್ವದ ಕೇಂದ್ರ ಇಲ್ಲಿ ಆರಂಭವಾಗುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.

ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಈ ಅಂಗಾಂಗ ಮರು ಪಡೆಯುವಿಕೆ ಕೇಂದ್ರವು ಕಾರ್ಯಾರಂಭ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ.

“ಕಸಿ ಮಾಡಲು ಅಂಗಾಂಗಗಳ ಖರೀದಿಯನ್ನು ಸುಗಮಗೊಳಿಸುವ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವು ಆಸ್ಪತ್ರೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ” ಎಂದು ಸಚಿವರು ತಿಳಿಸಿದ್ದಾರೆ.

ಮೃತ ದಾನಿಗಳಿಂದ ಅಂಗಗಳನ್ನು ಸಂಗ್ರಹಿಸುವ ವಿಶೇಷ ಘಟಕವಾಗಿ ಕಾರ್ಯನಿರ್ವಹಿಸುತ್ತದೆ, ಈ ಕೇಂದ್ರದಲ್ಲಿ ಐಸಿಯು, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ ಸೌಲಭ್ಯಗಳು ಮತ್ತು ವಿವಿಧ ಹಂತದ ತನಿಖಾ ಸಾಮರ್ಥ್ಯಗಳನ್ನು ಹೊಂದಿರುವ ಉದ್ದೇಶಿತ-ನಿರ್ಮಿತ ಸಮಗ್ರ ಸೇವೆ ದೊರೆಯಲಿದೆ.

ದಕ್ಷಿಣ ಭಾರತದ ಅತಿ ದೊಡ್ಡ ಆಸ್ಪತ್ರೆ:

ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರವನ್ನು ಹೊಂದಿರುವ ವಿಕ್ಟೋರಿಯಾ ಆಸ್ಪತ್ರೆ, ಗ್ಯಾಸ್ಟ್ರೋ ಎಂಟರಾಲಜಿ ಸಂಸ್ಥೆ ಮತ್ತು ಮೂತ್ರಶಾಸ್ತ್ರ ಅಂಗಾಂಗ ಕಸಿ ಸಂಸ್ಥೆ, ಮಿಂಟೋ ಆಸ್ಪತ್ರೆಯಲ್ಲಿ ಪ್ರಾದೇಶಿಕ ನೇತ್ರಶಾಸ್ತ್ರ ಸಂಸ್ಥೆ ಮತ್ತು ಸ್ಕಿನ್ ಬ್ಯಾಂಕ್ – ಹೀಗೆ ಎಲ್ಲವನ್ನೂ ಹೊಂದಿರುವ ಆಸ್ಪತ್ರೆಗಳ ಪೈಕಿ ನಮ್ಮ ವಿಕ್ಟೋರಿಯಾ ಆಸ್ಪತ್ರೆ ದಕ್ಷಿಣ ಭಾರತದ ಅತಿದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಇಲ್ಲಿ ಈಗ ನವೀಕೃತ ಕೇಂದ್ರ ಬರಲಿದೆ.

ಸಂಭಾವ್ಯ ದಾನಿಗಳ ಗುರುತಿಸುವಿಕೆ ಮತ್ತು ಸುರಕ್ಷಿತ ಅಂಗಾಂಗ ದಾನ ಪ್ರಕ್ರಿಯೆಗೆ ಕುಟುಂಬ ಸಮಾಲೋಚನೆ, ಉನ್ನತ ಮಟ್ಟದ ಐಸಿಯು ಆರೈಕೆ ಮತ್ತು ಕಾನೂನು ಕ್ರಮಗಳು ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ.

“ಈ ಯೋಜನೆಯು ಅತ್ಯಂತ ಅರ್ಥಪೂರ್ಣವಾಗಿದೆ. ಇದು ಬಡ ರೋಗಿಗಳಿಗೆ ಅನುಕೂಲವಾಗಲಿದೆ”ಎಂದು ಡಾ. ಪಾಟೀಲ್ ತಿಳಿಸಿದ್ದಾರೆ.

ಸಮಗ್ರ ಕೇಂದ್ರವಾಗಿ ಕಾರ್ಯ ನಿರ್ವಹಣೆ:

“ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಮಗ್ರ ಅಂಗಾಂಗ ಮರುಪಡೆಯುವಿಕೆ ಕೇಂದ್ರವನ್ನು ಪ್ರಾರಂಭಿಸುವುದರಿಂದ ಅಂಗಾಂಗ ದಾನ ಕಾರ್ಯಕ್ರಮವನ್ನು ಹೆಚ್ಚಿಸಲು ನಮಗೆ ಅವಕಾಶ ಸಿಗುತ್ತದೆ. ಇದರಿಂದ ಬಡವರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಹೇಳಿದ್ದಾರೆ.

“ಈ ಕೇಂದ್ರವು ಮೀಸಲಾದ ಸಿಬ್ಬಂದಿ, ಐಸಿಯು ಮತ್ತು ಹಾಸಿಗೆಗಳನ್ನು ಹೊಂದಿರುತ್ತದೆ. ಬೇಡಿಕೆ ಬಂದ ಕೂಡಲೇ ಕುಟುಂಬವು ಅನುಮೋದನೆ ನೀಡಿದ ನಂತರ ಐಸಿಯುಗಳಿಂದ ಮೀಸಲಾದ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ” ಎಂದು ಡಾ. ದೀಪಕ್ ಹೇಳಿದರು.
ಸಾಗಣೆಗೆ ಅನುಕೂಲವಾಗಲೆಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಆಸ್ಪತ್ರೆಯ ವಿಶೇಷತೆಗಳು

  • ಬಡವರಿಗೆ ಮತ್ತು ಹೆಚ್ಚು ಅರ್ಹರಿಗೆ ಉಪಯೋಗ
  • 70 ಐಸಿಯು ಹಾಸಿಗೆ ಲಭ್ಯ
  • 1000 ಸಾಮಾನ್ಯ ಹಾಸಿಗೆ ಸೌಲಭ್ಯ
  • 40 ಸಾಮೂಹಿಕ ಅಪಘಾತ ಚಿಕಿತ್ಸಾ ಹಾಸಿಗೆ ಸೌಲಭ್ಯ
  • ಸಾಗಣೆಗೆ ಅನುಕೂಲವಾಗಲೆಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕ್ರಮ
    ಸೌಲಭ್ಯ ಅಭಿವೃದ್ಧಿ, ಸ್ಥಾಪನೆಗೆ 1 ಕೋಟಿ ರೂ. ಅನುದಾನ ಮಂಜೂರು

RELATED ARTICLES
- Advertisment -
Google search engine

Most Popular