ಮೈಸೂರು: ಭಾರತೀಯ ರೈಲ್ವೆಯ ಮೈಸೂರು ವಿಭಾಗವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡ 28% ಕ್ಕಿಂತ ಹೆಚ್ಚು ಸರಕು ಸಾಗಣೆಯ ಅಸಾಧಾರಣ ಬೆಳವಣಿಗೆಯನ್ನು ಸಾಧಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಈ ಗಮನಾರ್ಹ ಸಾಧನೆಯು ಮೈಸೂರು ವಿಭಾಗವನ್ನು ಸರಕು ಸಾಗಣೆ ಬೆಳವಣಿಗೆಯ ವಿಷಯದಲ್ಲಿ ಭಾರತೀಯ ರೈಲ್ವೆಯಲ್ಲಿಯೇ ಎರಡನೇ ಸ್ಥಾನಕ್ಕೆ ಏರಿಸಿದೆ. ಈ ಸಾಧನೆಯನ್ನು ಗುರುತಿಸಿ ಸನ್ಮಾನ್ಯ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀಮತಿ ದರ್ಶನಾ ಜರ್ದೋಶ್ ರವರು, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರಿಗೆ ಮಂಗಳವಾರ, 19ನೇ ಸೆಪ್ಟೆಂಬರ್ 2023 ರಂದು ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಪ್ರಶಸ್ತಿ ನೀಡಿದರು.
ಸರಕು ಸಾಗಾಣೆ ವಿಭಾಗವು ಪ್ರಸಕ್ತ ವರ್ಷದ ಆಗಸ್ಟ್ ವರೆಗಿನ ಸರಕು ಸಾಗಣೆಯಲ್ಲಿ ಹಲವಾರು ಮಹತ್ವದ ಮುಖ್ಯಾಂಶಗಳನ್ನು ಹೊಂದಿದೆ:
- ವಿಭಾಗವು 2023 ರ ಜನವರಿ ಮಾಸದ 1.074 ದಶಲಕ್ಷ ಟನ್‌ಗಳ ಸಾಗಾಟದ ಹಿಂದಿನ ದಾಖಲೆಯನ್ನು ಮೀರಿಸಿ, 1.119 ದಶಲಕ್ಷ ಟನ್‌ಗಳಷ್ಟು ಮಾಸಿಕ ಲೋಡಿಂಗ್ ಸಾಧಿಸಿದೆ.
- ವಿಭಾಗವು 230 ರೇಕ್‌ಗಳೊಂದಿಗೆ 0.927 ದಶಲಕ್ಷ ಟನ್ ನ ಅತ್ಯಧಿಕ ಮಾಸಿಕ ಕಬ್ಬಿಣದ ಅದಿರು ಲೋಡಿಂಗ್ ಅನ್ನು ಸಾಧಿಸಿ ಮಾರ್ಚ್ 2023 ರಲ್ಲಿ 198 ರೇಕ್‌ಗಳೊಂದಿಗಿನ 0.803 ದಶಲಕ್ಷ ಟನ್ ನ ಹಿಂದಿನ ದಾಖಲೆಯನ್ನು ಮುರಿದಿದೆ.
- ವಿಭಾಗವು ಆಗಸ್ಟ್ 14, 2023 ರಂದು 12 ರೇಕ್‌ಗಳೊಂದಿಗೆ ಒಂದೇ ದಿನದಲ್ಲಿ ಅತ್ಯಧಿಕ ಸಂಖ್ಯೆಯ ಕಬ್ಬಿಣದ ಅದಿರು ರೇಕ್‌ಗಳ ಲೋಡಿಂಗ್ ನ ಹೊಸ ದಾಖಲೆಯನ್ನು ಸ್ಥಾಪಿಸಿದೆ.
- ವಿಭಾಗವು ಆಗಸ್ಟ್ 14, 2023 ರಂದು 848 ವ್ಯಾಗನ್‌ಗಳೊಂದಿಗೆ ಒಂದೇ ದಿನದಲ್ಲಿ ಅತಿ ಹೆಚ್ಚು ವ್ಯಾಗನ್‌ಗಳನ್ನು ಲೋಡ್ ಮಾಡಿರುವ ಹೊಸ ದಾಖಲೆಯನ್ನು ಸ್ಥಾಪಿಸಿದೆ.
ಆಗಸ್ಟ್ 2023 ರಲ್ಲಿ ವಿಭಾಗದಿಂದ ಹೊರಡುವ ಸಾಗಾಣೆಯ ಲೋಡಿಂಗ್ ಸಾಧನೆಯು ಅಸಾಧಾರಣವಾಗಿದ್ದೂ, 309.5 ರೇಕ್‌ಗಳೊಂದಿಗೆ 1.119 ದಶಲಕ್ಷ ಟನ್ ಲೋಡ್ ಆಗಿದೆ ಮತ್ತು ಆಗಸ್ಟ್ 2022 ಕ್ಕೆ ಹೋಲಿಸಿದರೆ ಶೇಕಡ 65.5 ಹೆಚ್ಚಳದ ಬೆಳವಣಿಗೆಯನ್ನು ಹೊಂದಿದೆ. ಈ ಸಾಧನೆಯು ಮಾಸಿಕವಾಗಿ ನಿಗದಿಯಾದ 0.820 ದಶಲಕ್ಷ ಟನ್ ಗಳ ಗುರಿಯನ್ನು ಗಮನಾರ್ಹ ಶೇಕಡ 36.5% ರಿಂದ ಮೀರಿಸಿದೆ.
ಕಬ್ಬಿಣದ ಅದಿರು ಲೋಡಿಂಗ್‌ಗೆ ಸಂಬಂಧಿಸಿದಂತೆ, ಆಗಸ್ಟ್ 2023 ರಲ್ಲಿ ವಿಭಾಗದ ಲೋಡಿಂಗ್ ನಿರ್ವಹಣೆ 0.927 ದಶಲಕ್ಷ ಟನ್ ಗಳೊಂದಿಗೆ 230 ರೇಕ್‌ಗಳ ಲೋಡಿಂಗ್ ಆಗಿದ್ದು, ಆಗಸ್ಟ್ 2022 ಕ್ಕೆ ಹೋಲಿಸಿದರೆ 93.1% ನ ಹೆಚ್ಚಳವನ್ನು ಸೂಚಿಸುತ್ತದೆ. ಆಗಸ್ಟ್ 2023 ರವರೆಗಿನ ಕಬ್ಬಿಣದ ಅದಿರು ಒಟ್ಟು 809 ರೇಕ್ ಗಳೊಂದಿಗೆ 3.272 ದಶಲಕ್ಷ ಟನ್ ಲೋಡಿಂಗ್ ಆಗಿದ್ದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅತ್ಯಂತ ಹೆಚ್ಚು, ಅಂದರೆ 47.5% ರಷ್ಟು ಹೆಚ್ಚಳವಾಗಿದೆ.
ವಿಭಾಗವು POL (ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್‌ಗಳು) ಲೋಡಿಂಗ್‌ನಲ್ಲಿ ಅದ್ಭುತ ಸಾಧನೆ ಮೆರೆದಿದ್ದೂ, ಆಗಸ್ಟ್ 2023 ರಲ್ಲಿ 0.166 ದಶಲಕ್ಷ ಟನ್ ಅನ್ನು ಲೋಡ್ ಮಾಡಲಾಗಿದೆ. ಇದು ಆಗಸ್ಟ್ 2022 ಕ್ಕೆ ಹೋಲಿಸಿದರೆ 10.7% ಹೆಚ್ಚಳ ಸಾಧಿಸಿದೆ. ಆಗಸ್ಟ್ 2023 ರವರೆಗೆ ಒಟ್ಟು 308 ರೇಕ್‌ಗಳೊಂದಿಗೆ 0.800 ದಶಲಕ್ಷ ಟನ್ POL ಲೋಡ್ ಆಗಿದ್ದೂ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 8.8% ಹೆಚ್ಚಳವಾಗಿದೆ.
ಮೈಸೂರು ವಿಭಾಗವು ಸರಕು ಲೋಡಿಂಗ್ ಸಾಧನೆಯಲ್ಲಿ ಮಾತ್ರವೇ ಅಲ್ಲದೇ, ಸರಕು ಸಾಗಣೆ ಆದಾಯದಲ್ಲಿಯೂ ಸಹ ಗಮನಾರ್ಹ ಹೆಚ್ಚಳ ಸಾಧಿಸಿದೆ. ಆಗಸ್ಟ್ 2023 ರ ಸರಕು ಸಾಗಣೆ ಆದಾಯವು 75.64 ಕೋಟಿಗಳಾಗಿದ್ದು, ಆಗಸ್ಟ್ 2022 ಕ್ಕೆ ಹೋಲಿಸಿದರೆ ದಾಖಲೆಯ 61.42% ರಷ್ಟು ಬೆಳವಣಿಗೆಯಾಗಿದೆ. ಆಗಸ್ಟ್ 2023 ರವರೆಗಿನ ಒಟ್ಟೂ ಸರಕು ಸಾಗಣೆ ಆದಾಯವು ರೂ. 399.43 ಕೋಟಿಗಳಷ್ಟಾಗಿದ್ದೂ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆರೋಗ್ಯಕರವಾದ ಶೇಕಡ 59.1 ರಷ್ಟು ಹೆಚ್ಚಳವಾಗಿದೆ.
ಈ ಸಂದರ್ಭದಲ್ಲಿ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ವಿಶೇಷ ಕೊಡುಗೆ ನೀಡಿದ ಮೈಸೂರು ವಿಭಾಗದ ಸಂಪೂರ್ಣ ತಂಡವನ್ನು ಅಭಿನಂದಿಸಿದರು. ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಮ್ಮ ಉತ್ಸಾಹವನ್ನು ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸಿದರು ಮತ್ತು ಮುಂಬರುವ ತಿಂಗಳುಗಳು ಮತ್ತು ವರ್ಷಗಳಲ್ಲಿ ಹೊಸ ಎತ್ತರಕ್ಕೆ ಏರಲು ಶ್ರಮಿಸುವಂತೆ ಕರೆ ನೀಡಿದರು.