ಬೆಂಗಳೂರು: ಸ್ಪೇಸ್ ಡಾಕಿಂಗ್ ಪ್ರಯೋಗದ (ಸ್ಪೇಡೆಕ್ಸ್) ಭಾಗವಾಗಿ ಬಾಹ್ಯಾಕಾಶದಲ್ಲಿ ಉಪಗ್ರಹಗಳ ಜೋಡಣೆ ಅನ್ನು ಇಸ್ರೊ ಗುರುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
‘ಶುಭೋದಯ.. ಭಾರತವು ಬಾಹ್ಯಾಕಾಶ ಇತಿಹಾಸದಲ್ಲಿ ತನ್ನ ಹೆಸರನ್ನು ಡಾಕ್ ಮಾಡಿದೆ! ಭಾರತದ ಇಸ್ರೊದಿಂದ ನಡೆಸಲಾದ SpaDeX ಮಿಷನ್ ಯಶಸ್ಸು ಸಾಧಿಸಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ಹೆಮ್ಮೆಪಡುತ್ತೇವೆ!” ಎಂದು ಎಕ್ಸ್ ಪೋಸ್ಟ್‌ನಲ್ಲಿ ಇಸ್ರೊ ಹೇಳಿದೆ. ಭಾರತವು ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ರಾಷ್ಟ್ರವಾಗಿದೆ ಎಂದೂ ಬರೆಯಲಾಗಿದೆ.
ಜೋಡಣೆ ಬಳಿಕ ಸಿಗ್ನಲ್ ಮೂಲಕ ಉಪಗ್ರಹಗಳ ನಿಯಂತ್ರಣ ಯಶಸ್ವಿಯಾಗಿದೆ. ಅನ್‌ಡಾಕಿಂಗ್ ಮತ್ತು ವಿದ್ಯುತ್ ಸರಬರಾಜು ಪರೀಕ್ಷೆಗಳನ್ನು ಮುಂಬರುವ ದಿನಗಳಲ್ಲಿ ನಡೆಸಲಾಗುವುದು ಎಂದು ಇಸ್ರೊ ತಿಳಿಸಿದೆ.
ಇದೇವೇಳೆ, ಈ ಪ್ರಯೋಗದಲ್ಲಿ ಭಾಗಿಯಾದ ಇಡೀ ತಂಡಕ್ಕೆ ಇಸ್ರೊ ಅಧ್ಯಕ್ಷ ವಿ ನಾರಾಯಣನ್ ಅಭಿನಂದನೆ ಸಲ್ಲಿಸಿದ್ದಾರೆ.
ಜನವರಿ 12ರಂದು, ಇಸ್ರೊ ಎರಡು ಬಾಹ್ಯಾಕಾಶ ನೌಕೆಗಳನ್ನು ಮೂರು ಮೀಟರ್ ಸಮೀಪಕ್ಕೆ ತಂದು ಡಾಕಿಂಗ್‌ಗೂ ಮುನ್ನ ಪ್ರಾಯೋಗಿಕ ಪ್ರಯತ್ನವನ್ನು ನಡೆಸಿತ್ತು. ಬಳಿಕ, ಎರಡೂ ಉಪಗ್ರಹಗಳನ್ನು ಹಿಂದಕ್ಕೆ ಸರಿಸಿ ಸುರಕ್ಷಿಯವಾಗಿ ನೆಲೆಗೊಳಿಸಿತ್ತು.
ಡಿಸೆಂಬರ್ 30 ರಂದು ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು (ಸ್ಪೇಡೆಕ್ಸ್) ಇಸ್ರೊ ಯಶಸ್ವಿಯಾಗಿ ಆರಂಭಿಸಿತ್ತು.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೂಲಕ 24 ಪೇಲೋಡ್‌ಗಳೊಂದಿಗೆ ಎಸ್‌ಡಿಎಕ್ಸ್ 01 (ಚೇಸರ್) ಮತ್ತು ಎಸ್‌ಡಿಎಕ್ಸ್ 02 (ಟಾರ್ಗೆಟ್) ಎಂಬ ಎರಡು ಸಣ್ಣ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ 60 ರಾಕೆಟ್ ನಭಕ್ಕೆ ಚಿಮ್ಮತ್ತು. 15 ನಿಮಿಷಗಳ ನಂತರ ಯೋಜನೆಯಂತೆ ತಲಾ 220 ಕೆ.ಜಿ ತೂಕದ ಎರಡು ಬಾಹ್ಯಾಕಾಶ ನೌಕೆಗಳನ್ನು 475 ಕಿ.ಮೀ ವೃತ್ತಾಕಾರದ ಕಕ್ಷೆಗೆ ಸೇರಿಸಿತ್ತು.
ಬಾಹ್ಯಾಕಾಶದಲ್ಲಿ, ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳು ಅಗತ್ಯವಿರುವಾಗ ಡಾಕಿಂಗ್ ತಂತ್ರಜ್ಞಾನವು ಅತ್ಯಗತ್ಯವಾಗಿರುತ್ತದೆ.
‘ಸ್ಪೇಡೆಕ್ಸ್’ ಯೋಜನೆಯ ಯಶಸ್ಸು ಭಾರತೀಯ ಅಂತರಿಕ್ಷ ನಿಲ್ದಾಣ ಮತ್ತು ಚಂದ್ರನ ಮೇಲೆ ಗಗನಯಾತ್ರಿಯನ್ನು ಇಳಿಸುವುದು ಮುಂತಾದ ಭವಿಷ್ಯದ ಕಾರ್ಯಾಚರಣೆಗಳಿಗೆ ನಿರ್ಣಾಯಕ ಸಂಕೀರ್ಣ ತಂತ್ರಜ್ಞಾನಗಳಿಗೆ ದೇಶಕ್ಕೆ ನೆರವಾಗಲಿದೆ.