ರಾಮನಗರ: ಗ್ರಾಹಕ ಸಂರಕ್ಷಣಾ ಅಧಿನಿಯಮ 2019ರ ಆಗಸ್ಟ್ 9 ರಂದು ಭಾರತ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಕಲಂಗಳು 2020ರ ಜುಲೈ-20 ರಂದು ಇನ್ನುಳಿದ ಕಲಂಗಳು ಜುಲೈ 24 ರಂದು ಜಾರಿಗೆ ಬಂದಿದೆ. ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಗ್ರಾಹಕರ ವ್ಯಾಜ್ಯಗಳನ್ನು ಅತೀ ಶೀಘ್ರದಲ್ಲಿ ಇತ್ಯರ್ಥಗೊಳಿಸುವುದು ಗ್ರಾಹಕರ ಸಂರಕ್ಷಣಾ ಅಧಿನಿಯಮದ ಮುಖ್ಯ ಉದ್ದೇಶವಾಗಿದೆ.
ಮೊದಲ ಬಾರಿ ಗ್ರಾಹಕರ ಹಕ್ಕುಗಳನ್ನು ಅಧಿನಿಯಮದ ಅಡಿಯಲ್ಲಿ ಸೇರಿಸಲಾಗಿದೆ. ವಿನ್ಯಾಸ, ನೇರ, ಮಾರಾಟ, ಇ-ಕಾಮರ್ಸ್, ಉತ್ಪನ್ನಗಳ ಬಾಧ್ಯತೆ ಮತ್ತು ಉತ್ಪನ್ನ ತಯಾರಕರ ಬಾಧ್ಯತೆ, ಉತ್ಪನ್ನ ಸೇವೆ ಒದಗಿಸುವವರ ಬಾಧ್ಯತೆ, ಉತ್ಪನ್ನಗಳ ಮಾರಾಟಗಾರರ ಬಾಧ್ಯತೆ, ಮಧ್ಯಸ್ಥಿಕೆ ಇತ್ಯಾದಿ ಹೊಸ ಅಂಶಗಳನ್ನು ಸೇರಿಸಲಾಗಿದೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಲು ಈ ಹಿಂದೆಯಿದ್ದ ಮೊತ್ತದ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಹಾದಿ ತಪ್ಪಿಸುವ ಹಾಗೂ ಸುಳ್ಳು ಜಾಹೀರಾತುಗಳು ಹಾಗೂ ಇತರೆ ಅನುಚಿತ ವ್ಯಾಪಾರ ಪದ್ಧತಿಗಳಿಂದ ಗ್ರಾಹರನ್ನು ರಕ್ಷಿಸಲು ದಂಡ ವಿಧಿಸಲು ಅವಕಾಶವಿದೆ. ಗ್ರಾಹಕರು ಎಲ್ಲಿ ವಾಸವಾಗಿದ್ದಾರೋ ಆ ಜಿಲ್ಲಾ ಆಯೋಗದಲ್ಲಿ ದೂರು ಸಲ್ಲಿಸಬಹುದಾಗಿದೆ. ಜಿಲ್ಲಾ ಆಯೋಗದ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಇದ್ದ ಕಾಲಾವಕಾಶವನ್ನು 30 ದಿನಗಳಿಂದ 45 ದಿನಗಳವರೆಗೆ ವಿಸ್ತರಿಸಲಾಗಿದೆ.
ಗ್ರಾಹಕರ ಸಂರಕ್ಷಣಾ ಅಧಿನಿಯಮ 2019ರಲ್ಲಿ ಪ್ರಥಮ ಬಾರಿ ಗ್ರಾಹಕರ ಹಕ್ಕುಗಳನ್ನು ವರಿಸಲಾಗಿದೆ. ಅದರ ಪ್ರಕಾರ ಸುರಕ್ಷತೆಯ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಪ್ರತಿನಿಧಿಸುವ ಹಕ್ಕು, ಪರಿಹಾರ ಪಡೆಯುವ ಹಕ್ಕು ಹಾಗೂ ಗ್ರಾಹಕ ಶಿಕ್ಷಣದ ಹಕ್ಕುಗಳನ್ನು ಒಳಗೊಂಡಿದೆ.
ಅಧಿನಿಯಮದ ಪ್ರಕಾರ ಯಾವ ವ್ಯಕ್ತಿಗೆ ಸರಕು ಅಥವಾ ಸೇವೆಯನ್ನು ಮಾರಾಟ ಮಾಡಲಾಗಿದೆಯೋ ಅವರು ಆ ಸರಕು ಅಥವಾ ಸೇವೆಗೆ ಸಂಬoಧಿಸಿದoತೆ ಅನುಚಿತ ವ್ಯಾಪಾರ ಪದ್ಧತಿ ಮತ್ತು ನಿರ್ಬಂಧ ಪದ್ಧತಿಯನ್ನು ಅನುಸರಿಸಲಾಗಿದೆ ಎಂಬ ಕಾರಣಕ್ಕೆ ದೂರು ಸಲ್ಲಿಸಬಹುದು. ಒಂದೇ ರೀತಿಯ ಆಸಕ್ತಿ ಹೊಂದಿರುವ ಹಲವಾರು ಗ್ರಾಹಕರು, ಗ್ರಾಹಕರ ಕಾನೂನು ಸಮ್ಮತ ವಾರಸುದಾರ, ಗ್ರಾಹಕ ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ತಂದೆ/ತಾಯಿ ಅಥವಾ ಕಾನೂನು ಸಮ್ಮತ ಪೋಷಕರು ದೂರು ಸಲ್ಲಿಸಬಹುದು.
ಮಾರಾಟಗಾರರು ಅಥವಾ ಸೇವೆ ಸರಬರಾಜು ಮಾಡುವವರು ಯಾವುದೇ ಅನುಚಿತ/ನಿರ್ಬಂಧಿತ ವ್ಯಾಪಾರ ಪದ್ಧತಿ ಅನುಸರಿಸದಿದ್ದಲ್ಲಿ ಹಾಗೂ ಮಾಡುವ ಒಪ್ಪಂದ ಅನುಚಿತವಾಗಿದ್ದಲ್ಲಿ, ಖರೀದಿಸಿರುವ ಅಥವಾ ಖರೀದಿಸುತ್ತೇವೆ ಎಂದು ಒಪ್ಪಿಕೊಂಡಿರುವ ಸರಕುಗಳಲ್ಲಿ ದೋಷವಿದ್ದಲ್ಲಿ ಹಾಗೂ ಇತರೆ ಕಾರಣಗಳಿಗೆ ದೂರು ಸಲ್ಲಿಸಬಹುದು.
ಸರಕು ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರು ನೀಡಿರುವ ಪ್ರತಿಫಲದ ಮೊತ್ತ ಐವತ್ತು ಲಕ್ಷ ರೂ.ಗಳಿಗಿಂತ ಮೀರದಿದ್ದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಸರಕು ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರು ನೀಡಿರುವ ಪ್ರತಿಫಲದ ಮೊತ್ತ ಐವತ್ತು ಲಕ್ಷ ರೂ.ಗಳಿಂದ ಎರಡು ಕೋಟಿ ರೂ.ಗಳವರೆಗೆ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಸರಕು ಅಥವಾ ಸೇವೆಯನ್ನು ಖರೀದಿಸಲು ಗ್ರಾಹಕರು ನೀಡಿರುವ ಪ್ರತಿಫಲದ ಮೊತ್ತ ಎರಡು ಕೋಟಿ ರೂ.ಗಳಿಂದ ಹತ್ತು ಕೋಟಿ ರೂ.ಗಳಿಗೆ ಮೇಲ್ಪಟ್ಟರೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಬಹುದು.
ದೂರು ಸಲ್ಲಿಸಲು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗದಲ್ಲಿ ದೂರುಗಳನ್ನು ಸಲ್ಲಿಸಲು ಇರುವ ಕಾಲಾವಕಾಶ ಎರಡು ವರ್ಷ ಯಾವ ದಿನಾಂಕದoದು ವ್ಯಾಜ್ಯಕ್ಕೆ ಕಾರಣ ಆರಂಭವಾಯಿತೋ ಅಂದಿನಿAದ ಎರಡು ವರ್ಷವನ್ನು ಲೆಕ್ಕ ಹಾಕಲಾಗುವುದು ಆದರೆ ಎರಡು ವರ್ಷದೊಳಗೆ ದೂರು ದಾಖಲಿಸಲು ಸಾಧ್ಯವಾಗದಿದ್ದಲ್ಲಿ ಸಮರ್ಪಕ ಕಾರಣ ಇತ್ತೆಂದು ಗ್ರಾಹಕರು ಸಾಭೀತು ಪಡಿಸಿದ್ದಲ್ಲಿ, ಈ ಎರಡು ವರ್ಷದ ಕಾಲ ಮಿತಿಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗ ವಿನಾಯಿತಿ ನೀಡಬಹುದು, ಯಾವ ಕಾರಣಕ್ಕೆ ವಿನಾಯಿತಿ ನೀಡಲಾಯಿತು ಎಂದು ಆಯೋಗವು ದಾಖಲಿಸಬೇಕು. ಎದುರುದಾರರಿಗೆ ತಕರಾರನ್ನು ಸಲ್ಲಿಸಲು 45 ದಿನಗಳನ್ನು ನಿಗಧಿಪಡಿಸಲಾಗಿದೆ.
ಗ್ರಾಹಕರು ವಿದ್ಯುನ್ಮಾನದ ಮೂಲಕ ದೂರುಗಳನ್ನು ದಾಖಲಿಸಬಹುದಾಗಿದೆ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಆಯೋಗದಲ್ಲಿ ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ದೂರುಗಳನ್ನು https://edaakhil.nic.in/index.html ಜಾಲತಾಣ ಕೊಂಡಿಯಲ್ಲಿ ದಾಖಲಿಸಬಹುದು. ಕರ್ನಾಟಕದಲ್ಲಿ ಈ ವ್ಯವಸ್ಥೆಯನ್ನು 2021ರ ಫೆಬ್ರವರಿ 4 ರಿಂದ ಆರಂಭಿಸಲಾಗಿದೆ. ಹೆಚ್ಚಿನ ವಿವರಗಳಿಗೆ ರಾಜ್ಯ ಆಯೋಗದ ಜಾಲತಾಣ ಭೇಟಿ ನೀಡಬಹುದು.
ಗ್ರಾಹಕರ ಆಯೋಗವನ್ನು ಪತ್ತೆ ಹಚ್ಚಲು www.ncdrc.nic.in ಗೆ ಲಾಗ್‌ಇನ್ ಆಗಬಹುದಾಗಿದೆ ಎಂದು ಜಿಲ್ಲಾ ಗ್ರಾಹಕರ ಆಯೋಗದ ಮಹಿಳಾ ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.