Friday, April 11, 2025
Google search engine

Homeರಾಜಕೀಯ'ಕರ್ನಾಟಕ 'ನಾಮಕರಣದ ಸುವರ್ಣ ಸಂದರ್ಭಕ್ಕೆ ವಿಶೇಷ ಕಾರ್ಯಕ್ರಮ: ಸಚಿವ ಶಿವರಾಜ್ ತಂಗಡಗಿ

‘ಕರ್ನಾಟಕ ‘ನಾಮಕರಣದ ಸುವರ್ಣ ಸಂದರ್ಭಕ್ಕೆ ವಿಶೇಷ ಕಾರ್ಯಕ್ರಮ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು: ‘ಮೈಸೂರು ರಾಜ್ಯ’ ಕರ್ನಾಟಕ ‘ಎಂದು ನಾಮಕರಣ ಗೊಂಡು 50 ವರ್ಷ ಪೂರ್ಣ ಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷವಾದ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲು ಸೂಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಅವರು ಇಂದು ಕನ್ನಡ ಭವನದ ಅಂತರಂಗದಲ್ಲಿ ನಡೆದ ಇಲಾಖೆಯ ಆಯವ್ಯಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಮೈಸೂರು ರಾಜ್ಯ 20- 10-1973 ರಂದು ಕರ್ನಾಟಕ ಎಂದು ಮರುನಾಮಕರಣವಾಗಿದ್ದು ಅದಕ್ಕೆ ಈಗ 50 ವರ್ಷ ಪೂರೈಸುತ್ತಿದೆ, ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಸಾರುವಂತಹ ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ವರ್ಷವಿಡಿ ಆಯೋಜಿಸಲು ಸೂಕ್ತ ರೂಪರೇಷೆಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.

ಈ ಬಾರಿ ಆಯವ್ಯಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನವನ್ನು ಕೋರಲಾಗುವುದು, ಆ ಮೂಲಕ ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ವ್ಯಾಪಕವಾಗಿ ಮತ್ತು ಹೆಚ್ಚು ಆಕರ್ಷಣೀಯವಾಗಿ ಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ರವೀಂದ್ರ ಕಲ್ಲಾಕ್ಷೇತ್ರವನ್ನು ನವೀಕರಿಸಿ ಅಲ್ಲಿನ ಆಸನ ವ್ಯವಸ್ಥೆ ಧ್ವನಿ ಮತ್ತು ಬೆಳಕು ಗಳ ಸುಧಾರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅವರು ಹೇಳಿದರು.

ಕರ್ನಾಟಕದ ಪರಂಪರೆಯನ್ನು ಬಿಂಬಿಸುವಂತಹ ಚಾಲುಕ್ಯ ಉತ್ಸವ, ಆನೆಗುಂದಿ ಉತ್ಸವ ,ಲಕ್ಕುಂಡಿ ಉತ್ಸವ ,ಹಂಪಿ ಉತ್ಸವ, ನವರಸಪುರ ಉತ್ಸವ, ಕದಂಬ ಉತ್ಸವ,ಇಟಗಿ ಉತ್ಸವ ಹಾಗೂ ಕನಕಗಿರಿ ಉತ್ಸವ ಮುಂತಾದ ಉತ್ಸವಗಳನ್ನು ಇನ್ನು ಮುಂದೆ ನಿಗದಿತ ದಿನಾಂಕ ಗಳಂದು ಪ್ರವಾಸಿಗರ ಅನುಕೂಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಆಯೋಜಿಸಬೇಕು. ಮತ್ತು ಅದಕ್ಕೊಂದು ವೇಳಾಪಟ್ಟಿಯನ್ನು ಸಿದ್ಧಪಡಿಸಬೇಕೆಂದು ಅವರು ಹೇಳಿದರು.

ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಜಾನಪದ ಲೋಕ ಸ್ಥಾಪನೆಗೆ ಸೂಕ್ತ ಯೋಜನೆ ರೂಪಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಐತಿಹಾಸಿಕ ಸ್ಮಾರಕಗಳ ಮುಂದೆ ಪ್ರತಿ ತಿಂಗಳು ರಜಾ ದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಸಭೆಯಲ್ಲಿನಿರ್ದೇಶಿಸಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ ,ನಿರ್ದೇಶಕ ವಿಶ್ವನಾಥ ಪಿ ಹಿರೇಮಠ ಹಾಗೂ ಇತರ ಉನ್ನತ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular